ಸೊಲ್ಲಾಪುರ :
ಸೊಲ್ಲಾಪುರದ ವೀರಶೈವ ಲಿಂಗಾಯತ ಪ್ರತಿಷ್ಠಾನ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಗೆ ಸೊಲ್ಲಾಪುರದ ಹುತಾತ್ಮ ಸ್ಮೂರ್ತಿ ಮಂದಿರದಲ್ಲಿ ರವಿವಾರ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ.ಪ್ರಭಾಕರ ಕೋರೆ ಮಾತನಾಡಿ, ಸಿದ್ದೇಶ್ವರ ದೇವರು ಪುಣ್ಯ ಕಾರ್ಯಗಳನ್ನು ಮಾಡಿದ ಸೊಲ್ಲಾಪುರ ನಗರದಲ್ಲಿ ನನಗೆ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದರು.
ಕೆಎಲ್ಇ ಸಪ್ತರ್ಷಿಗಳು ಬೆಳಗಾವಿಯಲ್ಲಿ ಆರಂಭಿಸಿದ ಶಿಕ್ಷಣದ ಸಸಿಯು ಇಂದು ಆಲದ ಮರವಾಗಿ ಬೆಳೆದು ನಿಂತಿದೆ. ಇಂದು ಕೆಎಲ್ಇ ಸಂಸ್ಥೆಯ 293 ಶಾಲಾ ಕಾಲೇಜುಗಳು, ಆಸ್ಪತ್ರೆಗಳು ಭಾರತದಲ್ಲಿ ಮಾತ್ರವಲ್ಲದೆ ದೇಶದ ಹೊರಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣವು ಪ್ರತಿಯೊಬ್ಬ ಜನಸಾಮಾನ್ಯರಿಗೂ ತಲುಪಬೇಕು ಎಂಬುದು ನಮ್ಮ ಉದ್ದೇಶ. ಶಿಕ್ಷಣವನ್ನು ಪಡೆದರೆ ಮಾತ್ರ ಸಮಾಜ ಮತ್ತು ದೇಶ ಪ್ರಗತಿ ಹೊಂದಬಹುದು.
ಡಾ.ಶಿವರತ್ನ ಶೇಟೆ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಡಾ.ಪ್ರಭಾಕರ ಕೋರೆ ಅವರು ಸಲ್ಲಿಸಿದ ಅನುಪಮ ಸೇವೆಯು ಮಹತ್ತರವಾಗಿದೆ, ಶಿಕ್ಷಣ ಕ್ಷೇತ್ರದಲ್ಲಿ ಅವರ ಕಾರ್ಯ ಕ್ರಾಂತಿಕಾರಿಯಾಗಿದ್ದು, ಇತಿಹಾಸದಲ್ಲಿ ಅವರ ಹೆಸರು ದಾಖಲಾಗಿದೆ ಎಂದು ಹೇಳಿದರು.
ನಾಗನಸೂರಿನ ಪರಮಪೂಜ್ಯ ಶ್ರೀಕಾಂತ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು. ಸೊಲ್ಲಾಪುರದ ವಳಸಂಗ ಸ್ಪಿನ್ನಿಂಗ್ ಮಿಲ್ನ ಅಧ್ಯಕ್ಷ ರಾಜಶೇಖರ ಶಿವದಾರೆ, ರಾಜ್ಯಸಭಾ ಮಾಜಿ ಸದಸ್ಯ ಅಮರ ಸಾಬಲೆ, ಸೊಲ್ಲಾಪುರದ ಲಿಂಗಾಯತ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ್ ಬಿಜಾಪುರೆ ಹಾಗೂ ಗಣ್ಯಮಾನ್ಯರು ಉಪಸ್ಥಿತರಿದ್ದರು.
ನ್ಯಾಯವಾದಿ ಬಸವರಾಜ ಸಲಗರ ಪರಿಚಯಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಗುರುನಾಥ ನಿಂಬಾಳೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷ ರಾಜಶೇಖರ್ ಶಿವಧರೆ ಸನ್ಮಾನಿತರ ಕಾರ್ಯವನ್ನು ಶ್ಲಾಘಿಸಿದರು. ರಾಜಶೇಖರ ಬಿಜಾಪುರೆ ವಂದಿಸಿದರು.