ಬೆಳಗಾವಿ :
ಬೀದಿಬದಿ ವ್ಯಾಪಾರಿಗಳು ಮಳೆ, ಗಾಳಿ, ಬಿಸಿಲು ಲೆಕ್ಕಿಸದೇ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ, ಅವರ ಆರೋಗ್ಯ, ಬದುಕು, ಭವಿಷ್ಯದ ಬಗ್ಗೆ ಸರ್ಕಾರ ವಿಚಾರ ಮಾಡಿ ಸೌಲಭ್ಯ ಒದಗಿಸಬೇಕು, ಮೊದಲಿನಿಂದಲೂ ನಮ್ಮ ತಂದೆಯವರು, ಬಡವರ ಶೋಷಿತರ ಪರವಾಗಿ ನಿಂತವರು, ನಮ್ಮ ಕುಟುಂಬ ಹಾಗೂ ನಮ್ಮ ತಂದೆ ಸತೀಶ ಜಾರಕಿಹೊಳಿ ಅವರು ಶ್ರಮಿಕ ಬೀದಿಬದಿ ವ್ಯಾಪಾರಿಗಳ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿ, ಬೀದಿಬದಿ ವ್ಯಾಪಾರಿಗಳ ಸಂಘಟನೆಯು ಶಕ್ತಿಯುತವಾಗಿದ್ದಾಗ ಸರ್ಕಾರವನ್ನು ಪ್ರಶ್ನಿಸಿ ಸಹಾಯ ಪಡೆದುಕೊಳ್ಳಬಹುದು. ಆ ನಿಟ್ಟಿನಲ್ಲಿ ಸಂಘವನ್ನು ಇನ್ನಷ್ಟು ಬಲಗೊಳಿಸುವ ಕೆಲಸವನ್ನು ನಿವೇಲ್ಲರೂ ಸೇರಿ ಮಾಡಬೇಕಿದೆ ಎಂದರು.
ಮಹಾನಗರ ಪಾಲಿಕೆಯ ಉಪಆಯುಕ್ತರಾದ ಭಾಗ್ಯಶ್ರೀ ಹುಗ್ಗಿ ಮಾತನಾಡಿ, ಈಗಾಗಲೇ ಪಿಎಂ ಸ್ವಣಿಧಿ ಮೂಲಕ ಸಾಲ ವ್ಯವಸ್ಥೆ, ಗುರುತಿನ ಚೀಟಿ, ಹಾಗೂ ಪ್ರಮಾಣಪತ್ರ ವಿತರಣೆ, ವಿಶೇಷ ಬೀದಿಬದಿ ವ್ಯಾಪಾರಿಗಳ ವಲಯಗಳ ನಿರ್ಮಾಣದ ಪ್ರಯತ್ನ, ಹೀಗೆ ಅನೇಕ ಕಾರ್ಯಕ್ರಮಗಳನ್ನು ಅವರಿಗಾಗಿ ಹಾಕಿದ್ದೇವೆ ಎಂದರು.
ಇದಕ್ಕೂ ನಗರದ ಕೇಂದ್ರ ಸ್ಥಾನದಲ್ಲಿ ಇರುವ ಕಾಂದಾ ಮಾರ್ಕೆಟಿನಿಂದ, ಚನ್ನಮ್ಮ ವೃತ್ತದ ಮಾರ್ಗವಾಗಿ, ಕುಮಾರ ಗಂಧರ್ವ ಮಂದಿರದವರೆಗೆ ನೂರಾರು ವ್ಯಾಪಾರಿಗಳೊಂದಿಗೆ, ಜೈಕಾರದ ಘೋಷಣೆ ಕೂಗುತ್ತ, ದಿನಾಚರಣೆಯ ಜಾಥಾದ ಮೂಲಕ ವ್ಯಾಪಾರಿಗಳು, ವೇದಿಕೆ ಕಾರ್ಯಕ್ರಮದತ್ತ ಬಂದು ತಲುಪಿದರು. ನಂತರ ಮೊದಲು ಯುವನಾಯಕ ರಾಹುಲ್ ಜಾರಕಿಹೊಳಿ, ಬೆಳಗಾವಿಯ ಕೆಲ ನಗರ ಸೇವಕರು, ಬೀದಿಬದಿ ವ್ಯಾಪರಿಗಳ ಸಂಘದ ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು, ಸಮಾಜದ ಇತರ ಗಣ್ಯರು ಸೇರಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಸಂಘಟಿತರು ಮಾತನಾಡಿ, ಬೀದಿಬದಿ ವ್ಯಾಪಾರಿಗಳ ಸಂಘಟನೆ ಇಂದು ಬಹುಮುಖ್ಯ ಆಗಿದೆ, ಹೋರಾಟ ಮಾಡದೇ ಇಂದು ಏನೂ ಸಿಗುವುದಿಲ್ಲ, ನಮ್ಮ ಸಮಸ್ಯ ದೂರಮಾಡಲು ಸರ್ಕಾರಿ ಸೌಲಭ್ಯ ಪಡೆಯಲು ನಾವು ಸಂಘಟಿತರಾಗಿ ಇರಬೇಕು ಎಂದರು.
ಇದೇ ವೇಳೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರಿಗೆ ವೇದಿಕೆ ಮೇಲಿದ್ದ ಗಣ್ಯರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿಯೂ ಶ್ರಮಿಕ ಬೀದಿಬದಿ ವ್ಯಾಪಾರಿಗಳಿಗೆ ಗಣ್ಯರು ಸನ್ಮಾನಿಸಿದರು. ವೇದಿಕೆ ಮೇಲೆ ನಾನಾ ಮಹಾಪುರುಷರ ವೇಷ ಭೂಷಣತೊಟ್ಟ ಚಿಣ್ಣರು ಎಲ್ಲರ ಗಮನ ಸೆಳೆದರು. ಈ ವೇಳೆ ಇಮಾಮ್ ಹುಸೇನ್ ನದಾಫ್, ಪ್ರಸಾದ ಕವಳೇಕರ, ರಾಷ್ಟ್ರೀಯ ಹಾಗೂ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಸಂಘಟನೆ ಪದಾಧಿಕಾರಿಗಳು, ಜಿಲ್ಲೆಯಾದ್ಯಂತ ಆಗಮಿಸಿದ ಸಾವಿರಾರು ವ್ಯಾಪಾರಿಗಳು ಉಪಸ್ಥಿತರಿದ್ದರು.