ಬೆಳಗಾವಿ : ಪ್ರತಿಯೊಬ್ಬರಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಸುವ ಕಾರ್ಯ ನಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಸಂಯುಕ್ತ ಮಹಾಮಂತ್ರಿ ಗೋಪಾಲ್ ಹೇಳಿದರು.
ನಗರದ ಲಿಂಗರಾಜ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ವಿಜಯದಶಮಿ ಅಂಗವಾಗಿ ರವಿವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ರಾಮಮಂದಿರ ನಿರ್ಮಾಣವಾಗಿದೆ. ಇನ್ನು ಮುಂದೆ ರಾಮ ರಾಜ್ಯ ನಿರ್ಮಾಣವಾಗಬೇಕಾಗಿದ್ದು ಭಾರತವನ್ನು ಒಂದು ಸುಸಂಸ್ಕೃತ ರಾಷ್ಟ್ರವಾಗಿ ಕಟ್ಟಬೇಕು. ಮಾತೃಭೂಮಿ ಮತ್ತು ಗೋ ರಕ್ಷಣೆ ಕೆಲಸ ನಡೆಯಬೇಕಾಗಿದೆ. ಮತಾಂತರದಿಂದ ಸಮಾಜ ಒಡೆಯುವ ಕೆಲಸ ನಡೆಯುತ್ತಿದೆ. ಹಿಂದುಗಳ ಮೇಲೆ ಬಾಂಗ್ಲಾದೇಶದಲ್ಲಿ ದೌರ್ಜನ್ಯ ಹೆಚ್ಚುತ್ತಿರುವುದು ದುರ್ದೈವದ ಸಂಗತಿ. ಪ್ರತಿಯೊಬ್ಬರಲ್ಲೂ ಹೋರಾಟದ ಮನೋಭಾವ ಬೆಳೆಯಬೇಕು ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಮಾತನಾಡಿ, ಭಾರತವನ್ನು ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕು. ದೇಶದಲ್ಲಿ ಆರ್ ಎಸ್ ಎಸ್ ಸಾಮರಸ್ಯ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಬೆಳೆಸುವ ಕಾರ್ಯ ಮಾಡುತ್ತಿದೆ. ಸಮೃದ್ಧ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರು ದುಡಿಯಬೇಕು ಎಂದು ತಿಳಿಸಿದರು.
ಬೆಳಗಾವಿ ಮಹಾನಗರದ ಪ್ರಮುಖ ಬೀದಿಗಳಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಗಮನ ಸೆಳೆಯಿತು.