ಬೆಳಗಾವಿ : ರಾಜ್ಯದ ಎರಡನೇ ರಾಜಧಾನಿ ಎಂದೇ ಗುರುತಿಸಲ್ಪಟ್ಟಿರುವ ಬೆಳಗಾವಿ ಮಹಾನಗರ ಪಾಲಿಕೆ ಇತ್ತೀಚಿನ ದಿನಗಳಲ್ಲಿ ಜನತೆಯ ದೂರು- ದುಮ್ಮಾನ ಆಲಿಸುವಲ್ಲಿ ಅತ್ಯಂತ ಕಳಪೆಯಾಗಿ ವರ್ತಿಸುವುದು ಕಂಡುಬಂದಿದೆ. ಮಹಾನಗರ ಪಾಲಿಕೆ ಆಡಳಿತ ಜನರಿಂದ ದೂರವಾಗುತ್ತಿದೆ ಎಂಬ ಬಲವಾದ ಅನುಮಾನ ನಾಗರಿಕರದ್ದು.
ಪಾಲಿಕೆಯ ಉತ್ತರ, ದಕ್ಷಿಣ ಸೇರಿದಂತೆ ವಿವಿಧ ವಲಯ ಕಚೇರಿಗಳಲ್ಲಿ ಇರುವ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಎಂದಿನಂತೆ ತೀರಾ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಎಂದರೆ ನಾಗರಿಕರು ಬೆಳಗ್ಗೆ ಕಚೇರಿಗಳಿಗೆ ತೆರಳಿದರೆ ಸಂಜೆವರೆಗೂ ಅಲ್ಲಿಯೇ ಇರಬೇಕಾದ ಸಂದಿಗ್ಧತೆಯನ್ನು ಅಧಿಕಾರಿಗಳು ಸೃಷ್ಟಿಸುತ್ತಿದ್ದಾರೆ. ಇದರಿಂದ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಇದ್ದು ಇಲ್ಲದ ಸ್ಥಿತಿ ಸೃಷ್ಟಿಯಾಗಿದೆ.
ಏಜೆಂಟರ ಹಾವಳಿಯಂತೂ ಮಿತಿ ಮೀರಿದೆ. ಇವರಿಗೆ ಕಡಿವಾಣ ಹಾಕುವವರೇ ಇಲ್ಲ ಎನ್ನಬಹುದು.
ಮಹಾನಗರ ಪಾಲಿಕೆ ಜನರ ಸಮಸ್ಯೆಗಳಿಗೆ ಒಟ್ಟಾರೆ ಸ್ಪಂದಿಸುವುದೇ ಇಲ್ಲ. ಅದರಲ್ಲೂ ನಾಗರಿಕರು ಫಾರ್ಮ್ ನಂಬರ್ ಎರಡರ ಅಹವಾಲು ಕೇಳಿಕೊಂಡು ಹೋದರೇ ಆಡಳಿತ ಗ್ರಾಹಕರನ್ನು ಎಡತಾಕಿಸುತ್ತಿದೆ. ಕಸ ವಿಲೇವಾರಿ ಮಾಡದೆ ಬೆಳಗಾವಿಯ ಬೀದಿಗಳು ಗಬ್ಬು ನಾರುತ್ತಿವೆ. ಪ್ರಮುಖ ಬೀದಿಗಳಲ್ಲಿ, ಮನೆಯ ಹಿಂದೆ ಮತ್ತು ಮುಂದಿನ ಕಸಗಳನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡುವಲ್ಲೂ ಆಡಳಿತ ಸಂಪೂರ್ಣವಾಗಿ ಸೋತಿದೆ. ದೂರು ನೀಡಿ ಹದಿನೈದು ದಿನಗಳು ಕಳೆದರೂ ಸ್ವಚ್ಛತೆ ಮಾತ್ರ ಗಗನ ಕುಸುಮವಾಗಿದೆ. ಡಿಸಿ ಕಂಪೌಂಡ್ ನಲ್ಲಿ ಬೀದಿ ದೀಪ ನಿಂತು ಹಲವು ದಿನಗಳು ಕಳೆದಿರುವುದು ಘೋರ ನಿರ್ಲಕ್ಷ್ಯತೆಗೆ ಸಾಕ್ಷಿ ಎನ್ನಬಹುದು.
ಒಟ್ಟಾರೆ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಸಂಪೂರ್ಣವಾಗಿ ಮೈಮರೆತಂತಿದೆ. ಜನರ ಬವಣೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಪಂದಿಸುವುದು, ದುರ್ಲಭ ಎನಿಸಿದೆ.
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಆರಂಭದಲ್ಲಿ ನಸುಕಿನಲ್ಲೇ ಸಿಬ್ಬಂದಿಗಳ ಹಾಜರಾತಿ, ಸ್ವಚ್ಚತಾ ಕೆಲಸದ ಬಗ್ಗೆ ಗಮನಹರಿಸುತ್ತಿದ್ದರು. ಜೊತೆಗೆ ಮಹಾನಗರ ಪಾಲಿಕೆಯ ಆಡಳಿತ ವೈಖರಿ ಬಗ್ಗೆ ಮೈಯೆಲ್ಲಾ ಕಣ್ಣಾಗಿ ಗಮನ ನೀಡುತ್ತಿದ್ದರು. ಆಗ ಇಡೀ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮತ್ತೆ ಎಂದಿನಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತೆ ತಮ್ಮ ಹಿಂದಿನ ವರಸೆ ಮುಂದುವರಿಸುತ್ತಿರುವುದು ಖೇದಕರ. ಆಯುಕ್ತರು ಹಾಗೂ ಮಹಾನಗರ ಪಾಲಿಕೆಯ ಆಡಳಿತ ಈ ಬಗ್ಗೆ ತುರ್ತು ಗಮನಹರಿಸಬೇಕು ಎನ್ನುವುದು ಜನತೆಯ ಒಕ್ಕೋರಲ ಆಗ್ರಹವಾಗಿದೆ.