ಹೊಸದಿಲ್ಲಿ: ಲೋಕಸಭೆಯಲ್ಲಿ ಸುದೀರ್ಘ 13 ತಾಸು ಚರ್ಚೆಯ ಬಳಿಕ ಬುಧವಾರ ತಡರಾತ್ರಿ ಅಂಗೀಕಾರಗೊಂಡ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಗುರುವಾರ ತಡರಾತ್ರಿ ರಾಜ್ಯಸಭೆಯಲ್ಲಿ ಅಂಗೀಕಾರಗೊಳಿಸಲಾಗಿದೆ. ಇನ್ನು ಮಸೂದೆಗೆ ರಾಷ್ಟ್ರಪತಿ ಅಂಕಿತ ಮಾತ್ರ ಬಾಕಿ ಉಳಿದಿದೆ.
ಮಸೂದೆಯ ಪರ 128 ಮತಗಳು ಬಂದರೆ, ವಿರುದ್ಧವಾಗಿ 95 ಮತಗಳು ಬಂದವು. 2.30 ರ ವೇಳೆಗೆ ಮಸೂದೆಯನ್ನು ಅಂಗೀಕಾರ ಮಾಡಲಾಯಿತು.
ಕೇಂದ್ರ ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆ ಮಂಡಿಸಿದ್ದು, ಪ್ರಸ್ತಾವಿತ ಕಾನೂನು ಮುಸ್ಲಿಮರ ವಿರುದ್ಧವಾಗಿಲ್ಲ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಉದ್ದೇಶವನ್ನೂ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ದ್ವಿತೀಯ ದರ್ಜೆ ನಾಗರಿಕರನ್ನಾಗಿಸಿದ್ದ ಕಾಂಗ್ರೆಸ್-ನಡ್ಡಾ
ಬಳಿಕ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿಯ ಜೆ.ಪಿ.ನಡ್ಡಾ ಅವರು, ತ್ರಿವಳಿ ತಲಾಖ್ ಅನ್ನು ನಿಷೇಧಿಸಿದ ಮೋದಿ ಸರಕಾರವು ಮುಸ್ಲಿಂ ಸಮುದಾಯದ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದಿದೆ. ಕಾಂಗ್ರೆಸ್ ಈ ದೇಶದಲ್ಲಿರುವ ಮುಸ್ಲಿಂ ಮಹಿಳೆಯರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿಸಿತ್ತು. ಮುಸ್ಲಿಂ ರಾಷ್ಟ್ರಗಳಲ್ಲೇ ತ್ರಿವಳಿ ತಲಾಖ್ ಹಲವು ವರ್ಷಗಳ ಹಿಂದೆ ನಿಷೇಧಿಸಲಾಗಿತ್ತು. ಆದರೆ 10 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಈ ವೇಳೆ ಮುಸ್ಲಿಂ ಮಹಿಳೆಯರಿಗೆ ಯಾವುದೇ ಅನುಕೂಲ ಮಾಡಲಿಲ್ಲ. ವಕ್ಫ್ ಆಸ್ತಿಯಲ್ಲಿ ಸುಧಾರಣೆ ತರುವ ಈ ಮಸೂದೆಗೆ ದೇಶದಲ್ಲಿ ಸಾಕಷ್ಟು ಬೆಂಬಲವಿದೆ. ಆದರೆ ಕಾಂಗ್ರೆಸ್ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮಧ್ಯರಾತ್ರಿ ಕಳೆದರೂ ಕಲಾಪ
ಇತ್ತೀಚಿನ ವರ್ಷಗಳಲ್ಲಿ ಲೋಕಸಭೆಯಲ್ಲಿ ಸುಗಮ ಕಲಾಪ ನಡೆಯುವುದೇ ಅಪರೂಪ ಎನ್ನು ವಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ವಕ್ಫ್ ತಿದ್ದುಪಡಿ ಮಸೂದೆಯನ್ನು ಪಾಸ್ ಮಾಡಲು ಲೋಕಸಭೆಯಲ್ಲಿ ಬುಧವಾರ, ರಾಜ್ಯಸಭೆಯಲ್ಲಿ ಗುರುವಾರ ತಡರಾತ್ರಿವರೆಗೂ ಕಲಾಪ ನಡೆಸಿರುವುದು ಅಚ್ಚರಿ ಮೂಡಿಸಿದೆ.
ಬುಧವಾರ ಮಧ್ಯಾಹ್ನ 12 ಗಂಟೆಗೆ ವಕ್ಫ್ ಮಸೂದೆವನ್ನು ಮಂಡಿಸಲಾಯಿತು. ಇದರ ಮೇಲೆ ಬರೋಬ್ಬರಿ 12 ಗಂಟೆಗಳ ಕಾಲ, ಅಂದರೆ ರಾತ್ರಿ 12 ಗಂಟೆಯವರೆಗೂ ಚರ್ಚೆ ನಡೆಸಲಾಯಿತು. ಇದಾದ ಬಳಿಕ ಮಸೂದೆಯನ್ನು ಪರಿಗಣಿಸಬೇಕೇ ಬೇಡವೇ ಎಂದು 12 ಗಂಟೆ ಸುಮಾರಿಗೆ ಮತದಾನ ನಡೆಸ ಲಾಯಿತು. ಇದು ಒಪ್ಪಿಗೆಯಾದ ಬಳಿಕ ಮಸೂದೆಗೆ ಒಪ್ಪಿಗೆ ಪಡೆದುಕೊಳ್ಳಲು ಮತದಾನ ನಡೆಸಲಾಯಿತು. ಇದು ಮುಗಿಯುವ ವೇಳೆಗೆ ಸಮಯ ಮಧ್ಯರಾತ್ರಿ 12.30 ದಾಟಿತ್ತು. ಬಳಿಕ ವಕ್ಫ್ ಮಸೂದೆಗೆ ಸೂಚಿಸ ಲಾಗಿದ್ದ 150ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಸ್ಪೀಕರ್ ಧ್ವನಿ ಮತದ ಮೂಲಕ ಅಂಗೀಕಾರ ಪಡೆದುಕೊಂಡರು. ಕೆಲವು ತಿದ್ದುಪಡಿಗಳಿಗೆ ವಿಪಕ್ಷ ನಾಯಕರು ಮತದಾನದ ಬೇಡಿಕೆ ಇಟ್ಟಾಗ ಮತದಾನ ನಡೆಸಲಾಯಿತು. ಕೊನೆಗೆ ಮಸೂದೆಕ್ಕೆ ಒಪ್ಪಿಗೆ ಪಡೆದುಕೊಳ್ಳುವ ವೇಳೆಗೆ ಸಮಯ 1.45 ಗಂಟೆಯಾಗಿತ್ತು. ಇದಾದ ಬಳಿಕ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವರ ಬಗ್ಗೆ ಚರ್ಚಿಸಿ ಒಪ್ಪಿಗೆ ಪಡೆಯುವಷ್ಟರ ಹೊತ್ತಿಗೆ ಬೆಳಗಿನ 3 ಗಂಟೆಯಾಗಿತ್ತು.
ರಾಜ್ಯ ಸಭೆಯ ಕಲಾಪವೂ ಗುರುವಾರ ರಾತ್ರಿ ಕಳೆದು ಶುಕ್ರವಾರ ಬೆಳಗಿನ 3 ಗಂಟೆಯವರೆಗೆ ನಡೆಯಿತು.
2004ರಲ್ಲಿ ದೇಶದಲ್ಲಿ 4.9 ಲಕ್ಷ ವಕ್ಫ್ ಆಸ್ತಿಗಳಿದ್ದವು. ಈಗ ಅದು 8.72 ಲಕ್ಷಕ್ಕೇರಿಕೆಯಾಗಿದೆ. ವಕ್ಫ್ ಮಂಡಳಿಯಲ್ಲಿ ಎಲ್ಲ ಮುಸ್ಲಿಂ ಪಂಗಡಗಳನ್ನೂ ಒಳಗೊಳ್ಳುವಂತೆ ಮಾಡುವುದೇ ಈ ಮಸೂದೆಯ ಉದ್ದೇಶ. ಈ ಹಿಂದಿನ ಸರಕಾರಗಳು ಮಾಡದೇ ಬಾಕಿ ಉಳಿಸಿರುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದಕ್ಕೆ ವಿಪಕ್ಷಗಳ ಬೆಂಬಲವೂ ನಮಗೆ ಬೇಕು ಎಂದೂ ರಿಜಿಜು ಹೇಳಿದರು. ಇದಕ್ಕೆ ಪ್ರತಿಯಾಗಿ ವಿಪಕ್ಷಗಳ ಪರವಾಗಿ ಚರ್ಚೆ ಆರಂಭಿಸಿದ ಕರ್ನಾಟಕದ ಕಾಂಗ್ರೆಸ್ ಸಂಸದ ಸೈಯದ್ ನಾಸೀರ್ ಹುಸೇನ್ ಅವರು, ಮುಸ್ಲಿಮರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡುವುದೇ ಬಿಜೆಪಿಯ ಗುರಿ. ಎಲ್ಲ ಕಾನೂನುಗಳನ್ನೂ ಧರ್ಮದ ಆಧಾರದಲ್ಲಿ ತರಲಾಗುತ್ತಿದೆ ಎಂದು ಆರೋಪಿಸಿದರು.