ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಇದೀಗ ಭೂ ಕುಸಿತಗಳು ಕಂಡು ಬಂದಿವೆ. ಖಾನಾಪುರ ತಾಲೂಕು ಕುಸಮಳಿ ಬಳಿ ಮಲಪ್ರಭಾ ನದಿಗೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ಸನಿಹ ನೀರಿನ ಹರಿವು ಹೆಚ್ಚಿದೆ. ಇದರಿಂದ ಸೇತುವೆಯ ರಸ್ತೆಯ ಮೇಲೆ ಭೂಕುಸಿತ ಕಂಡು ಬಂದಿದೆ. ಹೀಗಾಗಿ ಭಾನುವಾರ ಸಂಜೆಯಿಂದ ಈ ಮಾರ್ಗವಾಗಿ ಸಂಚರಿಸುವ ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ. ಬೆಳಗಾವಿ ಮತ್ತು ಚೋರ್ಲಾ ರಾಜ್ಯ ಹಾರಿಯಲ್ಲಿ ಸಂಚರಿಸುವ ವಾಹನ ಬೈಲೂರು ಕ್ರಾಸ್- ಬೈಲೂರು-ಹಬ್ಬಾನಟ್ಟಿ- ಜಾಂಬೋಟಿ ಮೂಲಕ ಪರ್ಯಾಯ ಮಾರ್ಗ ಬಳಸಿ ಸಾಗುವಂತೆ ಈಗ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿಯಿಂದ ಗೋವಾಕ್ಕೆ ಹೋಗುವ ವಾಹನಗಳು ಖಾನಾಪುರ-ರಾಮನಗರ ಮೂಲಕ ಸಾಗುವಂತೆ ತಾಲೂಕು ಆಡಳಿತದಿಂದ ಸೂಚಿಸಲಾಗಿದೆ.
ಕುಸಮಳಿ ಬಳಿ ಮಲಪ್ರಭಾ ನದಿಗೆ ಈ ಹಿಂದೆ ಇದ್ದ ಸೇತುವೆಯನ್ನು ಲೋಕೋಪಯೋಗಿ ಇಲಾಖೆ ತೆರವುಗೊಳಿಸಿತ್ತು. ಈಗ ಅಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಈ ಕಾಮಗಾರಿ ಮುಕ್ತಾಯದ ಹಂತದಲ್ಲಿರುವುದರಿಂದ ಹೊಸ ಸೇತುವೆ ಬಳಿ ತಾತ್ಕಾಲಿಕವಾಗಿ ನದಿಗೆ ಪೈಪ್ ಅಳವಡಿಸಿ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುಕೂಲತೆ ಮಾಡಿಕೊಡಲಾಗಿತ್ತು. ನಾಲ್ಕು ತಿಂಗಳಿನಿಂದ ಈ ಸೇತುವೆ ಮೂಲಕ ವಾಹನ ಸಂಚಾರ ನಡೆದಿತ್ತು. ಜಾಂಬೋಟಿ ಪ್ರದೇಶದಲ್ಲಿ ಮಳೆಯಾಗಿರುವುದರಿಂದ ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಈಗ ಈ ಅವಸ್ಥೆ ಉಂಟಾಗಿದೆ. ಜೊತೆಗೆ ಆಮಟೆ ಹಾಗೂ ದೇವಾಚಿಹಟ್ಟಿ ಬಳಿ ಮಲಪ್ರಭಾ ನದಿಯ ಬಾಂದಾರಗಳಿಗೆ ಅಳವಡಿಸಿದ್ದ ಗೇಟ್ ಭಾನುವಾರ ತೆರವುಗೊಳಿಸಲಾಗಿದೆ. ಈ ಎಲ್ಲದರ ಪರಿಣಾಮವಾಗಿ ತಾತ್ಕಾಲಿಕ ರಸ್ತೆಯಲ್ಲಿ ಭೂಕುಸಿತ ಕಂಡು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಬಳಿ ಬ್ಯಾರಿಕೇಡ್ ಅಳವಡಿಸಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.