ಖಾನಾಪುರ: ಖಾನಾಪುರ ತಾಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಕಲ್ಪಿಸಲು ಗರಿಷ್ಠ ಆದ್ಯತೆ ನೀಡುವುದಾಗಿ ಶಾಸಕ ವಿಠ್ಠಲ ಹಲಗೇಕರ ತಿಳಿಸಿದರು.
ಖಾನಾಪುರದಲ್ಲಿ ಶುಕ್ರವಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಖಾನಾಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ಏರಿಕೆಯಾಗುತ್ತಿದೆ. ಇದರಿಂದಾಗಿ ತರಗತಿಗಳ ಅಭಾವ ಉಂಟಾಗಿತ್ತು. ಈ ನಿಟ್ಟಿನಲ್ಲಿ ಸಚಿವ ಸುಧಾಕರ ಅವರಿಗೆ ಮನವಿ ಮಾಡಿ ಹೆಚ್ಚಿನ ಅನುದಾನವನ್ನು ತರಿಸಿ ಕೊಠಡಿಗಳ ನಿರ್ಮಾಣಕ್ಕೆ
ಭೂಮಿಪೂಜೆ ನೆರವೇರಿಸಲಾಗಿದೆ. ಖಾನಾಪುರ ಕಾಲೇಜಿನ ಐದು ಕೊಠಡಿಗಳಿಗೆ 1.20 ಕೋಟಿ ನಿಧಿಗೆ ಸರ್ಕಾರ ಇದೀಗ ಅನುಮೋದನೆ ನೀಡಿದೆ. ಜೊತೆಗೆ ಬೀಡಿ ಗ್ರಾಮದಲ್ಲಿ ಸರಕಾರಿ ಪದವಿ ಕಾಲೇಜಿಗೆ 1.60 ಕೋಟಿ ರೂ. ಬಿಡುಗಡೆಯಾಗಿದೆ. ಇದರಿಂದ ಖಾನಾಪುರ ಮತ್ತು ಬೀಡಿಯಲ್ಲಿ ಸುಸಜ್ಜಿತ ತರಗತಿ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.
ಖಾನಾಪುರ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕೆಲ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಬೆಳಗಾವಿಗೆ ಹೋಗಿ ಉನ್ನತ ವ್ಯಾಸಂಗ ಮಾಡುವ ಸ್ಥಿತಿಯಿದೆ. ಇಲ್ಲಿರುವ ಕೊರತೆ ನೀಗಿಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ಈಗ ಹೆಚ್ಚಿನ ಕೊಠಡಿ ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲತೆ ಮಾಡಿಕೊಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಖಾನಾಪುರ ತಾಲೂಕಿನಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವುದು ನಮ್ಮ ಉದ್ದೇಶವಾಗಿದೆ. ನಾವು ಇನ್ನೂ
ಹೆಚ್ಚಿನ ಪ್ರಮಾಣದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಪ್ರಾಚಾರ್ಯ ಡಾ.ದಿಲೀಪ್ ಜವಳಕರ ಮಾತನಾಡಿ, ನಮ್ಮ ಕಾಲೇಜು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಎರಡು ರ್ಯಾಂಕ್ ಪಡೆದುಕೊಂಡಿದೆ. ಜೊತೆಗೆ ನ್ಯಾಕ್ “ಎ” ಗ್ರೇಡ್ ಮಾನ್ಯತೆ ಗಳಿಸಿದೆ. ಮುಂದಿನ ವರ್ಷ ಬಿಸಿಎ ಕೋರ್ಸ್, ರಸಾಯನ ಶಾಸ್ತ್ರ ವಿಷಯ ಬೋಧನೆಗೂ ಅನುಮತಿ ಸಿಕ್ಕಿದೆ ಎಂದು ಹೇಳಿದರು.
ಖಾನಾಪುರ ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಗುಂಡು ತೋಪಿನಕಟ್ಟಿ, ಚೇತನ್ ಮನೇರಿಕರ್, ಮೋಹನ ಪಾಟೀಲ, ಶ್ರೀಕಾಂತ ಇಟಗಿ, ಸುನಿಲ್ ಮಡ್ಡಿಮನಿ, ಸುಂದರ ಕುಲಕರ್ಣಿ, ಪ್ರಶಾಂತ ಲಕ್ಕೆಬೈಲಕರ್, ರಾಹುಲ್ ಅಲ್ವಾನಿ, ಶಿವರಾಜ್ ಲೋಕೋಲ್ಕರ್, ಎ.ಬಿ. ಮುರಗೋಡ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರು, ಬೋಧಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಲ್ಲಪ್ಪ ಮಾರಿಹಾಳ ಸ್ವಾಗತಿಸಿದರು.