ಬೆಳಗಾವಿ:
ಆರೋಗ್ಯ ಸಂಸ್ಥೆಗಳು ಆರೋಗ್ಯಕ್ಕೆ ಸಂಬಂಧಪಟ್ಟ ಶಿಬಿರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣ ಮತ್ತು ಅತ್ಯಗತ್ಯದ ಸಮಾಜ ಸೇವೆಗೆ ಮುಂದಾಗಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಸಹ್ಯಾದ್ರಿ ನಗರದ ಸಾರಥಿ ಕಾಲೋನಿಯಲ್ಲಿ ಸಹರಾ ಫೌಂಡೇಷನ್ ಹಾಗೂ ಡಾ. ದೇವಗೌಡ ಶ್ರೀ ಆರ್ಥೋ ಮತ್ತು ಟ್ರೌಮಾ ಸೆಂಟರ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಮೂಳೆ ತಪಾಸಣೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ, ಮಾತನಾಡಿದರು.
ಈ ರೀತಿಯ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡದ್ದೇ ಆದಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಅರಿವು ಉಂಟಾಗುತ್ತದೆ ಜತೆಗೆ ಅವರ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಶ್ರೀ ಆರ್ಥೋಪೆಡಿಕ್ ಮತ್ತು ಟ್ರೌಮಾ ಸೆಂಟರ್ ನ ಡಾ. ದೇವಗೌಡ ಐ., ಸಹರಾ ಫೌಂಡೇಷನ್ ನ ಸಲ್ಮಾನ್, ಸಾರಥಿನಗರದ ಅಧ್ಯಕ್ಷ ಬಿ.ಆರ್. ಧಪಾಲೆ, ಸಂಗೀತಾ ತಂಗಡಿ, ರುದ್ರಯ್ಯ ಹಿರೇಮಠ, ಮುಷ್ತಾಕ್ ಮುಲ್ಲಾ, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.