ಕರ್ನಾಟಕ ರಾಜಕಾರಣದಲ್ಲಿ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಲಿಂಗಾಯತ ಸಮುದಾಯದ ಬಹುದೊಡ್ಡ ನಾಯಕಿಯಾಗಿ ಹೊರಹೊಮ್ಮಿರುವ ಅವರನ್ನು ಲೋಕಸಭಾ ಚುನಾವಣೆಗೆ ಅತ್ಯಂತ ಸಮರ್ಥ ರೀತಿಯಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಈ ಹಿಂದೆಯೇ ಅವರಿಗೆ ಬೆಳಗಾವಿ ಅಥವಾ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಚರ್ಚೆ ನಡೆದಿತ್ತು. ಆದರೆ, ಕೊನೆಗೆ ದೂರದ ಉಡುಪಿ ಜಿಲ್ಲೆಯ ಉಸ್ತುವಾರಿ ನೀಡಲಾಗಿತ್ತು. ಇದೀಗ ಕಾಂಗ್ರೆಸ್ ಪಕ್ಷ ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಧಾರವಾಡದ ಕಾಂಗ್ರೆಸ್ ವೀಕ್ಷಕ ಸ್ಥಾನವನ್ನು ನೀಡಿದೆ. ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮರೀಚಿಕೆಯಾಗಿ ಉಳಿದಿರುವ ಧಾರವಾಡ ಲೋಕಸಭಾ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಿಸಿ ಕೊಡುವ ನಿಟ್ಟಿನಲ್ಲಿ ಅತ್ಯಂತ ಸಮರ್ಥ ನಾಯಕರು ಯಾರಾದರೂ ಇದ್ದರೆ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ಎನ್ನುವುದನ್ನು ಕಾಂಗ್ರೆಸ್ ಪಕ್ಷ ಕೊನೆಗೂ ಮನವರಿಕೆ ಮಾಡಿಕೊಂಡಂತಿದೆ. ಇದೀಗ ಅವರಿಗೆ ದೊಡ್ಡ ಜವಾಬ್ದಾರಿ ಹೆಗಲೇರಿದೆ. ಪ್ರಭಾವಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಹೆಬ್ಬಾಳ್ಕರ್ ಸಿಂಹಸ್ವಪ್ನರಾಗುವುದರಲ್ಲಿ ಯಾವ ಸಂದೇಹವು ಇಲ್ಲ ಎಂಬ ಲೆಕ್ಕಾಚಾರದೊಂದಿಗೆ ಕಾಂಗ್ರೆಸ್ ಅವರಿಗೆ ಮಹತ್ವದ ಹೊಣೆಗಾರಿಕೆಯನ್ನು ನೀಡಿದೆ.
ಬೆಳಗಾವಿ ಜನ ಜೀವಾಳ ಜಾಲ: ಕಾಂಗ್ರೆಸ್ ಪಕ್ಷದ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಇದೀಗ ಬಹುದೊಡ್ಡ ಜವಾಬ್ದಾರಿ ಒಲಿದು ಬಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೆರೆಯ ಧಾರವಾಡದ ವೀಕ್ಷಕರನ್ನಾಗಿ ನೇಮಿಸುವ ಮೂಲಕ ದೊಡ್ಡ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆ ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲಿದೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಲಿಂಗಾಯತ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ತಮ್ಮ ಸಮುದಾಯದ ಮತ ಬೇಟೆಯ ಜವಾಬ್ದಾರಿಯನ್ನು ವಹಿಸಿಕೊಟ್ಟಿದೆ.
ಈ ಹಿಂದೆ ಸಹ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡುವ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಧಾರವಾಡ ಜಿಲ್ಲೆಯ ಉಸ್ತುವಾರಿಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನೀಡುವ ಬಗ್ಗೆ ಉತ್ಸುಕತೆ ತೋರಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅವರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿತ್ತು. ಇದೀಗ ಅವರ ಸಂಘಟನಾತ್ಮಕ ಶಕ್ತಿ ಮತ್ತು ವರ್ಚಸ್ವಿ ನಾಯಕತ್ವವನ್ನು ಗಮನಿಸಿರುವ ಕಾಂಗ್ರೆಸ್ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ದೊಡ್ಡ ಸವಾಲು ಎನಿಸಿರುವ ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಪಕ್ಷಕ್ಕೆ ಗೆಲುವು ತಂದು ಕೊಡುವ ಜವಾಬ್ದಾರಿಯನ್ನು ವಹಿಸಿಕೊಟ್ಟಿದೆ.
ಹೆಬ್ಬಾಳ್ಕರ್ ಬಗ್ಗೆ ಭಾರೀ ನಿರೀಕ್ಷೆ : ಮುಂಬರುವ ಲೋಕಸಭಾ ಚುನಾವಣೆಗೆ ನಾನು ಧಾರವಾಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಹೇಳಿದರು.
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ. ಹಿಂದೆ ವಿದ್ಯಾರ್ಥಿ ಕಾಂಗ್ರೆಸ್ ನಿಂದ ರಾಜ್ಯ ಉಪಾಧ್ಯಕ್ಷನಾಗಿದ್ದೆ, ಯೂಥ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದೆ, ಈಗ ಕೆಪಿಸಿಸಿ ಸದಸ್ಯನಾಗಿದ್ದೇನೆ. ಹೀಗಾಗಿ ನನಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗಲಿದೆ ಎಂದು ನಂಬಿದ್ದೇನೆ. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ಹೀಗಾಗಿ ಕೈ ಹೈಕಮಾಂಡ್ ಬಳಿ ನಾನು ಟಿಕೆಟ್ ಕೇಳುತ್ತೇನೆ. ಮೊದಲಿಂದಲೂ ನಾನು ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೇನೆ. ಪ್ರಯತ್ನಿಸುತ್ತಿದ್ದೇನೆ. ನನಗೆ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಿದೆ ಎಂದರು.
ಧಾರವಾಡದಲ್ಲಿ ಲಿಂಗಾಯತ ಮತಗಳು ಹೆಚ್ಚು ಇರುವ ಹಿನ್ನಲೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರ ವೀಕ್ಷಕರಾಗಿ ಆಯ್ಕೆ ಆಗಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಚುನಾವಣೆ ವಿಚಾರವಾಗಿ ಈಗಾಗಲೇ ಹಲವು ಸಭೆಗಳು ನಡೆದಿವೆ. ಅಂತಿಮವಾಗಿ ಹೆಬ್ಬಾಳ್ಕರ್ ಅವರು ಸಭೆ ನಡೆಸುವ ಮೂಲಕ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ನಿರ್ಧಾರವಾಗಲಿದೆ ಎಂದರು.
ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಲೋಕಸಭಾ ಚುನಾವಣೆಗೆ ಧಾರವಾಡ ಕಾಂಗ್ರೆಸ್ ವೀಕ್ಷಕರನ್ನಾಗಿ ಹೈಕಮಾಂಡ್ ನೇಮಕಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಮಗೂ ಬೀದರ್ ಉಸ್ತುವಾರಿ ನೀಡಿದ್ದಾರೆ. ಲಕ್ಷ್ಮಿ ಹೆಬ್ಬಾಳಕರ್ ಅವರು ಲಿಂಗಾಯತ ಲೀಡರ್ ಎಂದು ಹೇಳುವ ಅವಶ್ಯಕತೆ ಇದೆಯಾ? ಆ ಶಬ್ದ ಯಾಕೆ ಈಗ ಕೇಳ್ತಿದ್ದೀರಿ ಎಂದು ಪ್ರಶ್ನಿಸಿದರು. ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಳವಾಗಿವೆ.ಈ ಹಿನ್ನಲೆಯಲ್ಲಿ ಅವರನ್ನು ಆಯ್ಕೆ ಮಾಡಿರಬಹುದು. ಅವರು ಸ್ಥಳಿಯ ಕಾಂಗ್ರೆಸ್ ಮುಖಂಡರುಗಳ ಜೊತೆ ಸಭೆ ಮಾಡಿ ಲೋಕಸಭಾ ಚುನಾವಣೆಗೆ ಯಾರು ಸ್ಪರ್ಧಿಸಬೇಕು ಎಂಬುದು ಗೊತ್ತಾಗುತ್ತದೆ. ಈಗಾಗಲೇ ಲೋಕಸಭಾ ಚುನಾವಣೆಗೆ ಶೀವಲೀಲಾ ಕುಲಕರ್ಣಿ,ವಿಜಯ ಕುಲಕರ್ಣಿ, ವಿನೋದ ಅಸೋಟಿ, ಜಗದೀಶ ಶೆಟ್ಟರ್ ಹೆಸರು ಕೇಳಿ ಬರುತ್ತಿವೆ. ಆದರೆ ಆ ಬಗ್ಗೆ ಈಗಲೇ ಏನು ಹೇಳಲು ಆಗಲ್ಲ. ಧಾರವಾಡಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಬರ್ತಾರೆ. ಅವರು ಸಭೆ ಮಾಡ್ತಾರೆ. ಬಳಿಕ ಒಂದು ಹೆಸರು ಹೇಳ್ತಾರೆ. ಆ ಹೆಸರು ಹೈಕಮಾಂಡಗೆ ಕೊಡ್ತಾರೆ. ಆಗ ಯಾರು ಸ್ಪರ್ಧಿಸ್ತಾರೆ ಎಂಬುದು ಗೊತ್ತಾಗುತ್ತೆ ಮುಂದೆ ನೋಡೋಣ ಎಂದರು.