ಬೆಳಗಾವಿ : 2024ರಲ್ಲಿ ರಾಜ್ಯದಲ್ಲಿ ನಡೆದ ಘಟನೆಗಳನ್ನು ಅವಲೋಕಿಸಿದಾಗ ಬೆಳಗಾವಿಯ ಚಳಿಗಾಲದ ಅಧಿವೇಶನದ ಅಂತಿಮ ದಿನ ನಡೆದ ಕಹಿ ಘಟನೆ ಮೊದಲ ಸಾಲಿನಲ್ಲೇ ನಿಲ್ಲುತ್ತದೆ.
ಹಿರಿಯರ ಮನೆ, ಪ್ರಭುದ್ಧರ ಮನೆ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್ತಿನಲ್ಲಿ ಇತಿಹಾಸದಲ್ಲೇ ಕಾಣದಂತಹ, ಕೇಳದಂತಹ ಕಪ್ಪು ಚುಕ್ಕೆ ದಾಖಲಾಗಿದೆ.
ಇವರು ನಮ್ಮ ಪ್ರತಿನಿಧಿಗಳಾ ಎಂದು ಜನರು ತಲೆ ತಗ್ಗಿಸುವಂತಹ ಘಟನೆಗೆ ವಿಧಾನ ಪರಿಷತ್ತು ಸಾಕ್ಷಿಯಾಯಿತು. ವಿಪರ್ಯಾಸವೆಂದರೆ ಅಂದು ವಿಧಾನ ಪರಿಷತ್ತಿನ ಒಳಗೆ ನಡೆದ ಘಟನೆಯನ್ನು ಮರೆ ಮಾಚುವುದಕ್ಕೊಸ್ಕರ ಅದೇ ದಿನ ಹೊರಗಡೆ ನಡೆದ ಘಟನೆಗಳನ್ನು ವಿಜ್ರಂಭಿಸಲಾಗುತ್ತಿದೆ. ಹೊರಗಿನ ಬೆಳವಣಿಗೆಗಳನ್ನೇ ದೊಡ್ಡದು ಮಾಡುವ ಮೂಲಕ ಒಳಗೆ ನಡೆದ ಘನಘೋರ ಘಟನೆಯನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವುದನ್ನು ಇಡೀ ಸಮಾಜ ಕಣ್ಣರಳಿಸಿ ನೋಡುತ್ತಿದೆ.
ಈ ಇಡೀ ಘಟನೆ ಮತ್ತು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ನೋಡಿದರೆ, ಸದನದ ಒಳಗಿನ ಘಟನೆ ಮತ್ತು ಹೊರಗಿನ ಬೆಳವಣಿಗೆ ಎರಡನ್ನೂ ಪ್ರತ್ಯೇಕಿಸಿ ನೋಡಬೇಕು, ಪ್ರತ್ಯೇಕವಾಗಿಯೇ ತನಿಖೆಗೆ ಒಳಪಡಿಸಬೇಕು. ಹೊರಗಿನ ಬೆಳವಣಿಗೆ ಮೂಲಕ ಒಳಗಿನ ಘಟನೆಗೆ ರಕ್ಷಣೆ ಪಡೆಯಲು ಯತ್ನಿಸುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಹೊರಗಿನ ಬೆಳವಣಿಗೆಯನ್ನೇ ದೊಡ್ಡದು ಮಾಡಿ ಒಳಗಿನ ಘಟನೆ ಮುಚ್ಚಿ ಹಾಕುವ ಬಿಜೆಪಿ ಪ್ರಯತ್ನ ಮತ್ತು ಎರಡೂ ಘಟನೆಗಳನ್ನು ಸೇರಿಸಿ ಸಿಐಡಿ ತನಿಖೆಗೆ ಒಳಪಡಿಸಿರುವ ಸರಕಾರದ ನಿರ್ಧಾರ ಎರಡನ್ನೂ ಪ್ರಾಜ್ಞರು ಒಪ್ಪಲು ಸಾಧ್ಯವಿಲ್ಲ. ಕೆಲವರಂತೂ ಆ ಮಾತು ಆಡಿದಾಗ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅದೇ ಸ್ಥಳದಲ್ಲಿ ಕಾಲಲ್ಲಿದ್ದಿದ್ದನ್ನು ಕೈಗೆ ತೆಗೆದುಕೊಳ್ಳಬೇಕಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.
*ಒಳಗಿನ ಘಟನೆ ಖಂಡಿಸಿ, ಹೊರಗಿನ ಬೆಳವಣಿಗೆಗೆ ಪ್ರತಿಭಟಿಸಲಿ*
ಭಾರತೀಯ ಜನತಾ ಪಾರ್ಟಿ ಆ ದಿನ ವಿಧಾನಸೌಧದ ಹೊರಗೆ ಸಿ.ಟಿ.ರವಿ ಅವರನ್ನು ನಡೆಸಿಕೊಂಡಿರುವ ರೀತಿಗೆ ತೀವ್ರ ಪ್ರತಿಭಟನೆ ನಡೆಸುತ್ತಿದೆ. ಸರಕಾರ ಮತ್ತು ಪೊಲೀಸರು ಸಿ.ಟಿ.ರವಿ ಅವರ ಬಂಧನದ ನಂತರದ ಬೆಳವಣಿಗೆಗಳನ್ನು ಸಮರ್ಥಿಸಿಕೊಳ್ಳುತ್ತಿವೆ. ಆದರೆ ಬಿಜೆಪಿ ಇದನ್ನು ಖಂಡಿಸಿ ವಿವಿಧ ರೀತಿಯಲ್ಲಿ ಹೋರಾಟ ನಡೆಸುತ್ತಿದೆ. ಈಗಾಗಲೆ ರಾಜಭವನದ ಕದವನ್ನೂ ತಟ್ಟಿದ್ದಾರೆ. ಬಿಜೆಪಿಯ ಪ್ರತಿಭಟನೆ ತಪ್ಪು ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಬಿಜೆಪಿ ಈ ವಿಷಯದಲ್ಲಿ ಇನ್ನಷ್ಟು ಉಗ್ರ ಹೋರಾಟ ಮಾಡಲಿ, ಸರಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ.
ಆದರೆ, ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಹಿರಿಯ ಸದಸ್ಯ, ಮಾಜಿ ಮಂತ್ರಿ, ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಡೆದುಕೊಂಡ ರೀತಿ ಮತ್ತು ಆಡಿದ ಮಾತುಗಳನ್ನು ಬಿಜೆಪಿ ನಾಯಕರು, ಮಹಿಳಾ ಸಂಘಟನೆಗಳು, ಸಮಾಜದ ಹಿರಿಯರು ಮೊದಲು ಖಂಡಿಸಬೇಕು. ಹಾಗೆ ಮಾಡಿದಲ್ಲಿ ಪಕ್ಷದ ಕುರಿತು ಜನಸಾಮಾನ್ಯರ ಗೌರವ ಇನ್ನಷ್ಟು ಹೆಚ್ಚಲಿದೆ. ವಿಡಿಯೋಗಳಲ್ಲಿ ಅವರು ಆಡಿರುವ ಮಾತುಗಳು ದಾಖಲಾಗಿವೆ. ಖಾಸಗಿ ಚಾನೆಲ್ ಒಂದರ ಸಂದರ್ಶನದ ವೇಳೆ ಸಿ.ಟಿ.ರವಿ, `ಅಕ್ಕಾ ನಾನು ಹೃದಯದಿಂದ ಕೆಟ್ಟವನಲ್ಲ’ ಎನ್ನುವ ಮೂಲಕ ಒಳಗಡೆ ತನ್ನಿಂದ ತಪ್ಪಾಗಿದೆ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ, ಸಿ.ಟಿ.ರವಿ ಕೂಡ ತಮ್ಮ ಬಾಯಿಯಿಂದ ಆ ಕ್ಷಣದಲ್ಲಿ ಬಂದಿರುವ ಪದವನ್ನು ಹಿಂದಕ್ಕೆ ಪಡೆದು, ಕ್ಷಮೆ ಕೇಳಿದರೆ ದೊಡ್ಡ ಮನುಷ್ಯರಾಗುತ್ತಾರೆ, ಅದಕ್ಕೆ ಈಗಲೂ ಕಾಲ ಮಿಂಚಿಲ್ಲ.
ಆದರೆ ನಂತರದ ಬೆಳವಣಿಗೆಗಳನ್ನಿಟ್ಟುಕೊಂಡು ಒಳಗಡೆ ಅವಾಚ್ಯ ಶಬ್ದ ಬಳಸಿದ ಘಟನೆಯನ್ನು ಮುಚ್ಚಿಹಾಕಲು ಯಾರೂ ಅವಕಾಶ ನೀಡಬಾರದು. ಹಾಗೆ ಮಾಡಿದಲ್ಲಿ ನಮ್ಮನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಹಿರಿಯರ ಮನೆಗೆ ಇದೊಂದು ಕರಾಳ ದಿನ, ಕಪ್ಪು ಚುಕ್ಕೆ. ಅದನ್ನು ಹಾಗೆಯೇ ಉಳಿದುಹೋಗಲು ಅವಕಾಶ ನೀಡಬಾರದು. ಒಳಗಿನ ಘಟನೆಯಿಂದ ರಕ್ಷಣೆ ಪಡೆಯಲು ಹೊರಗಿನ ಬೆಳವಣಿಗೆಯ ಆಶ್ರಯ ಪಡೆಯುವುದು ಸರಿಯಲ್ಲ.
ಬಿಜೆಪಿ ಮೊದಲಿನಿಂದಲೂ ದೇವರು, ಧರ್ಮ, ಭಾರತೀಯ ಸಂಸ್ಕೃತಿ, ಹೆಣ್ಣು ಮಕ್ಕಳ ಬಗ್ಗೆ ಗೌರವ ನೀಡುವ ಪಕ್ಷ ಎಂದು ಬಿಂಬಿಸಿಕೊಂಡೇ ಬೆಳೆದ ಪಕ್ಷ. ಅಂತಹ ಪಕ್ಷ ಈಗ ಈ ರೀತಿ ಒಬ್ಬ ಮಹಿಳೆಗೆ ತನ್ನದೇ ಪಕ್ಷದ ನಾಯಕ ಆಡಿದ ಮಾತುಗಳನ್ನು ಖಂಡಿಸದಿದ್ದರೆ, ಕೇವಲ ರಾಜಕೀಯಕ್ಕೋಸ್ಕರ ಅದನ್ನು ಬದಿಗೆ ಸರಿಸಿ, ಜನರ ದಾರಿ ತಪ್ಪಿಸಲು ಹೊರಟರೆ ಪಕ್ಷವನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಎಲ್ಲೊ ನಡೆದ ಘಟನೆಗಳನ್ನಿಟ್ಟುಕೊಂಡು ಬೀದಿಗಿಳಿದು ಪ್ರತಿಭಟಿಸುವ ಬಿಜೆಪಿ ಮಹಿಳಾ ಘಟಕದವರು ಈ ಘಟನೆಯಲ್ಲಿ ಸಿ.ಟಿ.ರವಿ ಬೆನ್ನಿಗೆ ನಿಂತಿರುವುದು ವಿಪರ್ಯಾಸವೇ ಸರಿ. ಪಕ್ಷ ಯಾವುದಾದರೂ ಮಹಿಳೆ ಮಹಿಳೆಯೇ ಎನ್ನುವುದನ್ನು ಮರೆತಂತೆ ವರ್ತಿಸುವುದು ಸರಿಯಲ್ಲ.
ಸರಕಾರದ ನಡೆಯೂ ಸರಿಯಲ್ಲ
ಈ ಪ್ರಕರಣದ ಕುರಿತಂತೆ ಸರಕಾರದ ನಡೆಯೂ ಸರಿಯೆನಿಸುವುದಿಲ್ಲ. ಒಳಗಿನ ಘಟನೆ ಮತ್ತು ಹೊರಗಿನ ಬೆಳವಣಿಗೆ ಎರಡೂ ಒಂದಕ್ಕೊಂದು ಸಂಬಂಧ ಹೊಂದಿದ್ದರೂ ಎರಡನ್ನೂ ಪ್ರತ್ಯೇಕವಾಗಿಯೇ ತನಿಖೆ ನಡೆಸಬೇಕಿದೆ. ಒಂದಕ್ಕೊಂದು ತಾಳೆ ಹಚ್ಚಿ ನೋಡುವುದಕ್ಕೆ ಇದರಲ್ಲಿ ಅವಕಾಶವನ್ನೇ ನೀಡಬಾರದು. ಮಹಿಳೆಯ ಬಗ್ಗೆ, ಅದರಲ್ಲಿ ಸಚಿವೆಯೊಬ್ಬರ ಬಗ್ಗೆ ಅಂತಹ ಶಬ್ದ ಬಳಸಿದ್ದನ್ನು ಬೇರೆ ಯಾವುದೇ ಬೆಳವಣಿಗೆಗಳೊಂದಿಗೆ ಸಮ್ಮಿಳಿತಗೊಳಿಸದೆ, ಅದಷ್ಟನ್ನೇ ಪ್ರತ್ಯೇಕವಾಗಿ ತನಿಖೆಗೆ ಒಳಪಡಿಸಬೇಕು. ಬೇರೆಲ್ಲ ಬೆಳವಣಿಗೆಗಳನ್ನು ಪ್ರತ್ಯೇಕವಾಗಿಯೇ ತನಿಖೆ ನಡೆಬೇಕು. ಆಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಶಿಕ್ಷೆ ಅನುಭವಿಸುವಂತಾಗಬೇಕು.
ಹೊರಗಿನ ಬೆಳವಣಿಗೆಗಳನ್ನು ಒಳಗಿನ ಘಟನೆಯೊಂದಿಗೆ ಸೇರಿಸಿ ತನಿಖೆ ನಡೆಸಿದಲ್ಲಿ ಅದು ಎಲ್ಲೊ ದಾರಿ ತಪ್ಪುವ ಆತಂಕವಿದೆ. ಪ್ರತ್ಯೇಕ ಸಂಸ್ಥೆಯಿಂದ ಅಥವಾ ಪ್ರತ್ಯೇಕ ತಂಡದಿಂದ ಎರಡೂ ಘಟನೆಗಳನ್ನು ತನಿಖೆಗೊಳಪಡಿಸಬೇಕು. ಈ ಬಗ್ಗೆ ಸಮಾಜ ಧ್ವನಿ ಎತ್ತಬೇಕು. ಮಹಿಳಾ ಸಂಘಟನೆಗಳು ಪಕ್ಷಾತೀತವಾಗಿ, ಜಾತ್ಯತೀತವಾಗಿ ಎದ್ದು ನಿಲ್ಲಬೇಕು. ಇಲ್ಲವಾದಲ್ಲಿ ಸತ್ಯ ಅಡಗಿ ಸುಳ್ಳು ವಿಜ್ರಂಭಿಸುವ ಅಪಾಯವಿದೆ. ಅದಕ್ಕೆ ಅವಕಾಶ ನೀಡದಿರುವುದು ಎಲ್ಲರ ಜವಾಬ್ದಾರಿ.
ಈ ವಿಷಯದಲ್ಲಿ ಸಭಾಪತಿಗಳು ಕೂಡ ಮಹಿಳೆಯೊಬ್ಬರಿಗೆ ತಮ್ಮ ಪರಿದಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಎಲ್ಲ ಎಲ್ಲೆಗಳನ್ನು ಮೀರಿ ನಿಲ್ಲುವುದನ್ನು ಸಮಾಜ ನಿರೀಕ್ಷಿಸುತ್ತಿದೆ.