ಬೆಳಗಾವಿ:
ಸೂಕ್ಷ್ಮ ಮನಸ್ಸಿನವಳಾಗಿರುವ ಮಹಿಳೆ ಕಠಿಣ ಕವಚ ಧರಿಸಿಕೊಂಡು ಮಹಿಳಾ ಸಮಾಜ ಸೃಷ್ಟಿ ಮಾಡಬೇಕಾದ ಅವಶ್ಯಕತೆ ಇದೆ. ಅಂದಾಗ ಮಾತ್ರ ಬಸವಣ್ಣನವರ ಸಮಾನತೆಯ ಕನಸು ನನಸಾಗಲಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ನಗರದ ಲಾರ್ಡ್ಸ್ ಇಕೋ ಇನ್ ಹೋಟೆಲ್ ನಲ್ಲಿ ಶನಿವಾರ ಕರ್ನಾಟಕ ಲೇಖಕಿಯರ ಸಂಘದ ಬೆಳಗಾವಿ ಶಾಖೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ದೈಹಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಮಹಿಳೆ ಪುರುಷರಿಗಿಂತ ಗಟ್ಟಿಯಾಗಿದ್ದಾಳೆ. ಯಾವ ಕ್ಷೇತ್ರ ತೆಗೆದುಕೊಂಡರು ಪುರುಷರಿಗಿಂತ ಹಿಂದೆ ಉಳಿದಿಲ್ಲ. ಆದರೆ ಹೆಣ್ಣನ್ನು ಸಮಾಜ ಗುರುತಿಸುವುದರಲ್ಲಿ ಹಿಂದೆಬಿದ್ದಿದೆ. ಸಹನೆಗೆ ಮತ್ತೊಂದು ಹೆಸರಾಗಿರುವ ಹೆಣ್ಣು ಸ್ವಾಭಿಮಾನದ ಜೀವನವನ್ನು ಬಯಸುತ್ತಾಳೆ. ಆದರೆ ಇಂದಿನ ಕಾಲದಲ್ಲಿ ನಾವೂ ನಿಮ್ಮಷ್ಟೆ ಸಮರ್ಥರಿದ್ದೇವೆ ಎಂದು ಸಾರುವ ಅಗತ್ಯತೆ ಇದೆ ಎಂದು ಹೆಬ್ಬಾಳಕರ್ ಹೇಳಿದರು.
ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ಸಾಹಿತಿಯೇ. ಹಿಂದಿನ ಕಾಲದಲ್ಲಿ ಅನಕ್ಷರಸ್ಥ ಮಹಿಳೆಯರು ತಾವೇ ಜಾನಪದ ಹಾಡುಗಳನ್ನು ರಚಿಸಿ, ಅಡುಗೆ ಮಾಡುವಾಗ, ರಾಗಿ ಬೀಸುವಾಗ, ಹೊಲಗಳಲ್ಲಿ ಕೆಲಸ ಮಾಡುವಾಗ, ತೊಟ್ಟಿಲು ತೂಗುವಾಗ ಹಾಡುತ್ತಿದ್ದರು. ಆಗ ಭಾವನೆಗಳನ್ನು ಹೊರಗೆಡವಲು ಇಂದಿನಂತೆ ಬೇರೆ ಮಾರ್ಗಗಳಿರಲಿಲ್ಲ. ಈಗ ಲೇಖಕಿಯರ ಸಂಘ ಆರ್ಥಿಕವಾಗಿ ಶಕ್ತಿ ಇಲ್ಲದವರ ಬರಹಗಳನ್ನು ಪ್ರಕಟಿಸಲು ನೆರವಾಗಬೇಕು. ಇನ್ನೊಬ್ಬರನ್ನು ನೋಡಿ ಮತ್ಸರ ಪಡದೆ ಬೆನ್ನು ತಟ್ಟುವ ಕೆಲಸ ಮಾಡಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್ ಪುಷ್ಪ, ಬೆಳಗಾವಿ ಶಾಖೆಯ ಅಧ್ಯಕ್ಷರಾದ ಡಾ. ಕೆ. ಆರ್ ಸಿದ್ದಗಂಗಮ್ಮ, ಪಾರ್ವತಿ ಪಿಟಗಿ, ಹಮೀದಾ ಬೇಗಂ, ಡಾ. ನೀತಾ ರಾವ್, ನದೀಮ್ ಸನದಿ, ಸಾಹಿತಿ ಡಾ. ಸರಜೂ ಕಾಟ್ಕರ್, ಜ್ಯೋತಿ ಬದಾಮಿ, ಡಾ. ನಿರ್ಮಲಾ ಬಟ್ಟಲ, ಡಾ. ನೀತಾರಾವ್, ರಾಜನಂದಾ ಗಾರ್ಗಿ ಮೊದಲಾದವರು ಉಪಸ್ಥಿತರಿದ್ದರು.