ಬೆಳಗಾವಿ: ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನವಾದ ಸೋಮವಾರ ಸುಳೇಬಾವಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ್ ಭರ್ಜರಿ ಪ್ರಚಾರ ನಡೆಸಿದರು.
ಆದಿಶಕ್ತಿ ಸುಳೇಭಾವಿಯ ಮಹಾಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸುವುದರೊಂದಿಗೆ ಪ್ರಚಾರ ಆರಂಭಿಸಿದ್ದ ಲಕ್ಷ್ಮೀ ಹೆಬ್ಬಾಳಕರ್, ಅದೇ ಸ್ಥಳದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ ಕೊನೆಯ ಬಹಿರಂಗ ಪ್ರಚಾರವನ್ನೂ ನಡೆಸಿದರು. ಕಿಕ್ಕಿರಿದು ಸೇರಿದ್ದ ಜನಸ್ತೋಮದ ಮಧ್ಯೆ ಸುಳೇಬಾವಿಯ ಗಲ್ಲಿ ಗಲ್ಲಿಗಳಲ್ಲಿ ರೋಡ್ ಶೋ ನಡೆಸಿದ ಲಕ್ಷ್ಮೀ ಹೆಬ್ಬಾಳಕರ್, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡುತ್ತಿರುವುದಕ್ಕೆ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ಹೇಳಿದರು.
ನಾನು ಏನೇ ಕೆಲಸ ಮಾಡುವುದಿದ್ದರೂ ಮೊದಲು ಸುಳೇಬಾವಿಯ ಮಹಾಲಕ್ಷ್ಮಿಯ ಆಶಿರ್ವಾದ ಪಡೆದೇ ಮಾಡುತ್ತೇನೆ. ದೇವಿಯ ಆಶಿರ್ವಾದ ಸದಾ ನನ್ನ ಮೇಲಿರುತ್ತದೆ. ಹಾಗೆಯೇ ಸುಳೇಬಾವಿಯ ಜನರೂ ಸಹ ಎಂದೂ ನನ್ನ ಕೈ ಬಿಡುವುದಿಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ ಇಂದು ಇಲ್ಲಿ ಜನರು ಸೇರಿದ್ದೀರಿ. ನಾನು ಕಳೆದ 5 ವರ್ಷದಲ್ಲಿ ನಿಮ್ಮೆಲ್ಲರ ಆಶಿರ್ವಾದದಿಂದ ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯವಾಯಿತು. ಮತ್ತೆ 5 ವರ್ಷ ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ಮಾಡಿಕೊಡಿ. ದಯವಿಟ್ಟು ಈ ಚುನಾವಣೆಯಲ್ಲಿ ಇವಿಎಂ ಯಂತ್ರದಲ್ಲಿ ನನ್ನ ಕ್ರಮ ಸಂಖ್ಯೆ 4, ಹಸ್ತದ ಗುರುತಿಗೆ ತಾವೆಲ್ಲರೂ ಮತಗಳನ್ನು ನೀಡಿ ಹರಸಿ, ಆಶೀರ್ವದಿಸಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ನಾನು ಕಳೆದ ಸುಮಾರು ಒಂದು ತಿಂಗಳು ಕ್ಷೇತ್ರವನ್ನೆಲ್ಲ ಸುತ್ತಾಡಿದಾಗ ಸೇರುತ್ತಿರುವ ಜನರು, ಅವರ ಬೆಂಬಲ ನೋಡಿದರೆ ನನಗೆ ಪ್ರತಿಸ್ಪರ್ಧಿಯೇ ಇಲ್ಲವೇನೋ ಎನ್ನುವ ಭಾವನೆ ಮೂಡಿದೆ. ಪಕ್ಷಾತೀತವಾಗಿ ಕ್ಷೇತ್ರದ ಜನರು ನನ್ನೊಂದಿಗೆ ನಿಂತಿದ್ದಾರೆ. ಎಲ್ಲರ ಬೆಂಬಲದೊಂದಿಗೆ ಮತ್ತೊಮ್ಮೆ ಆಯ್ಕೆಯಾಗಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಬೃಹತ್ ಯೋಜನೆಗಳನ್ನು ಕ್ಷೇತ್ರಕ್ಕೆ ತರುತ್ತೇನೆ ಎಂದು ಅನರು ಭರವಸೆ ನೀಡಿದರು.
ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವಸದಸ್ಯರು, ಸರ್ವ ಸಮಾಜಗಳ ಮುಖಂಡರು, ಗ್ರಾಮದ ಜನರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.