ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ಗೃಹಕಚೇರಿಯಲ್ಲಿ ಬುಧವಾರ ಜನತಾ ದರ್ಶನ ನಡೆಸಿದರು. ಸಚಿವರ ಬಳಿ ಅಹವಾಲು ಹೇಳಿಕೊಳ್ಳಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಸೇರಿದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಬೆಳಗ್ಗೆ 10 ಗಂಟೆಗೆ ಸರಿಯಾಗಿ ಆರಂಭಗೊಂಡ ಜನತಾ ದರ್ಶನದಲ್ಲಿ ವೈಯಕ್ತಿಕ ಸಮಸ್ಯೆಗಳು, ಗ್ರಾಮದ ಕೆಲಸಗಳು, ಸಮುದಾಯದ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಜನರು ಸಚಿವರ ಬಳಿ ಮನವಿ ಸಲ್ಲಿಸಿದರು.
ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಸಚಿವರು ಪರಿಹಾರ ನೀಡಿದರೆ, ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಆಪ್ತ ಸಹಾಯಕರಿಗೆ ಸೂಚನೆ ನೀಡಿದರು. ಸುಮಾರು 4 ಗಂಟೆಗೂ ಹೆಚ್ಚು ಕಾಲ ನಡೆದ ಜನತಾ ದರ್ಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಸಮಾಧಾನಚಿತ್ತದಿಂದ ಜನರ ಸಮಸ್ಯೆಗಳನ್ನು ಆಲಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಜನತಾ ದರ್ಶನ ನಡೆಸುತ್ತಿದ್ದ ವೇಳೆ ಅವರ ಪುತ್ರ ಮೃಣಾಲ್ ಹೆಬ್ಬಾಳಕರ್ ಸಾಥ್ ನೀಡಿದರು. ಜನರ ಕೆಲವೊಂದು ಸಮಸ್ಯೆಗಳನ್ನು ಮೃಣಾಲ್ ಹೆಬ್ಬಾಳಕರ್ ಅವರೂ ಅಲಿಸಿ, ಪರಿಹಾರ ನೀಡಿದರು.
ಜನರ ಸಮಸ್ಯೆಗಳಿಗೆ ಸಚಿವರ ಸಕಾರಾತ್ಮಕ ಸ್ಪಂದನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು.