ಅಥಣಿ : ಮೊಬೈಲ್ನಲ್ಲಿ ಎಲ್ಲ ಸುದ್ದಿಗಳೂ ಸಿಗುವ ಸ್ಪರ್ಧೆಯ ದಿನಗಳಲ್ಲಿ, ನಿತ್ಯ ಪತ್ರಿಕೆ ಓದದೇ ಇದ್ದರೆ ಸತ್ಯ ಸುದ್ದಿ ತಿಳಿಯಲು ಸಾಧ್ಯವಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಡಹಳ್ಳಿ ಗ್ರಾಮದಲ್ಲಿ ರಾಜ್ಯ ಕಾರ್ಯನಿರತ ಗ್ರಾಮೀಣ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸತ್ಯ ಸುದ್ದಿ ಪ್ರಕಟವಾಗುವುದು ಬಹುಪಾಲು ಮುದ್ರಣ ಮಾಧ್ಯಮದಲ್ಲಿಯೇ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿ ವರದಿ ಮಾಡುವ ಪತ್ರಿಕೆಗಳ ಅಗತ್ಯ ಹೆಚ್ಚಾಗಿದೆ’ ಎಂದರು.
ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಮಾತನಾಡಿ, ‘ಸಮಾಜದ ಮೂಲಭೂತ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಮುದ್ರಣ ಮಾಧ್ಯಮದ ಹಾಗೂ ಗ್ರಾಮೀಣ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಪತ್ರಕರ್ತರ ಶ್ರಮಕ್ಕೆ ಸೂಕ್ತ ಬೆಲೆ ಸಿಗಬೇಕು. ಮುದ್ರಣ ಮಾಧ್ಯಮದ ಅಸ್ತಿತ್ವ ಮತ್ತು ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಪತ್ರಕರ್ತರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ’ ಎಂದರು.
ತೆಲಸಂಗದ ವಿರೇಶ್ವರ ದೇವರು ಮಾತನಾಡಿ, ‘ಮನೆ ಮನೆಗಳಲ್ಲಿ ನಿತ್ಯ ಪತ್ರಿಕೆ ಓದುವ ಸಂಸ್ಕೃತಿ ಬೆಳೆಯಬೇಕು. ಸತ್ಯ ವರದಿಗಾರಿಕೆ, ಸಾಮಾಜಿಕ ಸಾಮರಸ್ಯ ಮತ್ತು ಪತ್ರಕರ್ತರ ನೈತಿಕ ಜವಾಬ್ದಾರಿ ಇಂದು ಬಹಳಷ್ಟಿದೆ. ಪತ್ರಿಕೆ ಮತ್ತು ಪತ್ರಕರ್ತರು ಇಲ್ಲದ ಈ ಸಮಾಜವನ್ನು ಮುನ್ನಡೆಸಲು ಸಾಧ್ಯವಿಲ್ಲ’ ಎಂದರು.