ಬೆಳಗಾವಿ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲಿರುವ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗಲು ಅಥಣಿಯಲ್ಲಿ ಸುಮಾರು ₹1 ಕೋಟಿ ವೆಚ್ಚದಲ್ಲಿ ಹೈಟೆಕ್ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ವಿಕ್ರಂಪೂರ್ ಬಡಾವಣೆಯ ಎಚ್ವಿಸಿ ಕಾಲೊನಿಯಲ್ಲಿ ನೂತನವಾಗಿ ಆರಂಭಗೊಂಡ ಮೌಲಾನಾ ಅಜಾದ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಅಥಣಿ ಪುರಸಭೆಯ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ ಹೈಟೆಕ್ ಗ್ರಂಥಾಲಯ ಸ್ಥಾಪಿಸಲು ಒಂದು ಕೋಟಿ ಮೀಸಲಿಡಲಾಗಿದೆ. ಈ ಗ್ರಂಥಾಲಯ ಸ್ಥಾಪನೆಯಿಂದ ಮತಕ್ಷೇತ್ರದ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಮತಕ್ಷೇತ್ರದ ಅಲ್ಪಸಂಖ್ಯಾತರ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಮಂಜೂರು ಮಾಡಲಾಗಿದೆ. ಇಲ್ಲಿ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.