ಮೈಸೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಇತರರ ವಿರುದ್ಧ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಈ ಸಂಬಂಧ ಈ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣಗೆ ಲೋಕಾಯುಕ್ತ ನೋಟಿಸ್ ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಬಿ ರಿಪೋರ್ಟ್ ಸಲ್ಲಿಸುವುದಾಗಿ ಲೋಕಾಯುಕ್ತ ಮಾಹಿತಿ ನೀಡಿದೆ. ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲ ಎಂದು ತಿಳಿಸಿದೆ. A1 ಸಿದ್ದರಾಮಯ್ಯ, A2 ಪಾರ್ವತಿ, A3 ಮಲ್ಲಿಕಾರ್ಜುನ ಸ್ವಾಮಿ, A4 ದೇವರಾಜು ವಿರುದ್ಧ ದಾಖಲಾದ ಕೇಸ್ನಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖೆಗೆ ಅರ್ಹವಲ್ಲದ ಪ್ರಕರಣ ಎಂದು ತಿಳಿಸಿದೆ.
ತಾವು (ಸ್ನೇಹಮಯಿ ಕೃಷ್ಣ) ನೀಡಿದ ದೂರಿನ ಮೇರೆಗೆ ಮೈಸೂರು ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು. ಪ್ರಕರಣವು ತನಿಖಾಧಿಕಾರಿಗಳಿಗೆ ಸಿವಿಲ್ ಸ್ವರೂಪದ್ದೆಂದು, ತನಿಖೆ ನಡೆಸಲು ತಕ್ಕುದಲ್ಲವೆಂದು, ಸಂಗತಿ ಅಥವಾ ಕಾನೂನಿನ ತಪ್ಪು ತಿಳಿವಳಿಕೆಯೆಂದು, ಕ್ರಮ ಜರುಗಿಸಲು ತಕ್ಕುದಲ್ಲವೆಂದು ಸಾಕ್ಷ್ಯಾಧಾರಗಳ ಕೊರತೆ ಎಂದು ಕಂಡುಬಂದಿದೆ. ಈ ವರದಿಯನ್ನು ವಿರೋಧಿಸುವುದಿದ್ದರೆ, ತಾವು ಈ ನೋಟಿಸ್ ತಲುಪಿದ ಒಂದು ವಾರದೊಳಗೆ ಮ್ಯಾಜಿಸ್ಟ್ರೇಟರ ಎದುರು ಆ ಬಗ್ಗೆ ವಿರೋಧಿಸಬಹುದು ಎಂದು ಸ್ನೇಹಮಯಿ ಕೃಷ್ಣಗೆ ನೀಡಿದ ನೋಟಿಸ್ನಲ್ಲಿ ಲೋಕಾಯುಕ್ತ ತಿಳಿಸಿದೆ.
ಪ್ರಕರಣದ ಎ1 ಆರೋಪಿಯಿಂದ ಎ4 ಆರೋಪಿ ವರೆಗಿನ ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲ. ಹೀಗಾಗಿ, ಅಂತಿಮ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಮುಡಾದಿಂದ 2016ರಿಂದ 2024ನೇ ಸಾಲಿನ ವರೆಗೆ 50:50 ಅನುಪಾತದಲ್ಲಿ ಪರಿಹಾರಾತ್ಮಕ ನಿವೇಶನಗಳನ್ನು ನೀಡಿರುವ ಆರೋಪಗಳ ಬಗ್ಗೆ ಹೆಚ್ಚುವರಿ ತನಿಖೆ ನಡೆಸಿ ಕಲಂ 173 (8) ಸಿಆರ್ಪಿಸಿಯಡಿ ಹೆಚ್ಚುವರಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಹೇಳಿದೆ.
ಆರ್ಟಿಐ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರ ದೂರಿನ ಮೇರೆಗೆ, ಬೆಂಗಳೂರಿನ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 25 ರಂದು ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶಿಸಿತ್ತು.