ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಾಳೆ ಈ ರಾಜ್ಯದ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ನ 19 ಶಾಸಕರ ಬೆಂಬಲ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೆಂಬಲ ಘೋಷಣೆ ಮಾಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ನಾಳೆ ಮುಖ್ಯಮಂತ್ರಿ ಆಗುವುದಾದರೆ ಆದರೆ ನಾವು ಬೆಂಬಲ ನೀಡುತ್ತೇವೆ ಎಂದರು. ಸುಮ್ಮನೆ ಜೆಡಿಎಸ್ನಿಂದ ಐದು ಜನ ಬರ್ತಾರೆ, ಹತ್ತು ಜನ ಬರ್ತಾರೆ, ಅಷ್ಟು ಜನ ಬರ್ತಾರೆ, ಇಷ್ಟು ಜನ ಬರ್ತಾರೆ ಎಂದು ಅವರು ಹೇಳುವುದೇ ಬೇಡ. ಅವರು ನಾಳೆಯೇ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ನ ಎಲ್ಲ ಶಾಸಕರ ಬೆಂಬಲವನ್ನೂ ನೀಡುತ್ತೇವೆ ಎಂದು ಆಫರ್ ನೀಡಿದರು.
ಕಾಂಗ್ರೆಸ್ ಪರಿಸ್ಥಿತಿ ನೋಡಿದರೆ ಎಷ್ಟು ಜನ ಮುಖ್ಯಮಂತ್ರಿ ಆಗುತ್ತಾರೋ ಗೊತ್ತಿಲ್ಲ. ಟಿಸಿಎಂ ಅಂದರೆ ಟೆಂಪ್ರವರಿ ಸಿಎಂ, ಡಿಸಿಎಂ ಅಂದ್ರೆ ಡೂಪ್ಲಿಕೇಟ್ ಸಿಎಂ ಎಂದು ಅವರು ವ್ಯಂಗ್ಯವಾಡಿದರು.
ಅವರು ಡಿನ್ನರ್ ಮೀಟಿಂಗ್, ಲಂಚ್ ಮೀಟಿಂಗ್, ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಕೊಂಡಿದ್ದಾರೆ. ಇದನ್ನೇ ಮಾಡಿಕೊಂಡಿರ್ತಾರೋ ಇಲ್ಲ ಕೆಲಸ ಮಾಡುತ್ತಾರೆಯೋ ಎಂದು ಪ್ರಶ್ನಿಸಿದರು.
ಡಿಸೆಂಬರ್ನಲ್ಲಿ ಅಧಿವೇಶನ ಕರೆಯುತ್ತಾರೆ. ಇದಾದ ಬಳಿಕ 31 ಜಿಲ್ಲೆಯಲ್ಲೂ ರೈತ ಸಾಂತ್ವನ ಯಾತ್ರೆ ಮಾಡುತ್ತೇನೆ. 25 ಜನ ನಾಯಕರ ಜೊತೆ ಬಸ್ ಮಾಡಿಕೊಂಡು ಪ್ರವಾಸ ಮಾಡುತ್ತೇನೆ. ಐದು ತಿಂಗಳಲ್ಲಿಯೇ ಈ ಸರ್ಕಾರದ ಪಾಪದ ಕೊಡ ತುಂಬಿದೆ. ಲೂಟಿ ಮಾಡಲೆಂದು ಬಂದಿರುವ ಸರ್ಕಾರವಿದು. ಈ ಸರ್ಕಾರದಿಂದ ಯಾವ ನಿರೀಕ್ಷೆ ಇಟ್ಟುಕೊಂಡಿಲ್ಲ, ಹಣ ಕೇಳಿದ್ರೆ ಸರ್ವರ್ ಡೌನ್ ಎಂದು ಹೇಳುತ್ತಾರೆ. ಸರ್ವರ್ ಡೌನ್ ಅಲ್ಲ ಸರ್ಕಾರವೇ ಡೌನ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿದೇಶ ಪ್ರವಾಸ ಮುಗಿಸಿ ರಾಜ್ಯಕ್ಕೆ ಮರಳಿರುವ ಎಚ್ ಡಿ ಕುಮಾರಸ್ವಾಮಿ ಅವರು ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.