ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ದರವನ್ನು ಶೇ. 15 ರಿಂದ 20 ರಷ್ಟು ಏರಿಕೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ಹಿಂದೆ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಹಾಗೂ ಕೆ ಎಸ್ ಆರ್ ಟಿ ಸಿ ಅಧ್ಯಕ್ಷ ಗುಬ್ಬಿ ಶ್ರೀನಿವಾಸ್ ಅವರು ಕೆ ಎಸ್ ಆರ್ ಟಿಸಿ ಬಸ್ ದರ ಏರಿಕೆ ಮಾಡುವ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದರು. ಇದೀಗ ಮತ್ತೊಮ್ಮೆ ಪ್ರಸ್ತಾವನೆಯನ್ನು ಸರಕಾರದ ಮುಂದಿಡಲಾಗಿದೆ. ಶಕ್ತಿ ಯೋಜನೆ ಜಾರಿಗೆ ಬಂದ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಪ್ರಯಾಣಿಕರ ಮತ್ತು ಆದಾಯದಲ್ಲಿ ಹೆಚ್ಚಳವಾಗಿದೆ. ಆದರೆ, ಸಿಬ್ಬಂದಿಯ ವೇತನ, ಬೆಲೆ ಏರಿಕೆ ಮುಂತಾದ ಸಮಸ್ಯೆ ಎದುರಾಗಿದೆ. ಈ ನಿಟ್ಟಿನಲ್ಲಿ ಬಸ್ ದರ ಏರಿಕೆಯನ್ನು ಶೇಕಡಾ 15 ರಿಂದ 20ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ.