ಬೆಂಗಳೂರು :
ಸದಾಶಿವನಗರದ ತಮ್ಮ ನಿವಾಸಕ್ಕೆ ಸೋಮವಾರ ಬೆಳಗ್ಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಬೆಂಗಳೂರಿನ ಇತಿಹಾಸ ಪುಸ್ತಕವನ್ನು ಸ್ವಹಸ್ತಾ ಕ್ಷಾರದೊಂದಿಗೆ ಪ್ರೀತಿ ಪೂರ್ವಕವಾಗಿ ಉಡುಗೊರೆಯಾಗಿ ನೀಡಿದರು.
*ಎಸ್ ಎಂ ಕೃಷ್ಣ ಅವರ ನಿವಾಸದ ಬಳಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:*
ವಿಧಾನಸಭೆ ನೂತನ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಲಾಗುತ್ತಿದ್ದು, ನನಗೆ ರಾಜಕೀಯವಾಗಿ ಪ್ರೋತ್ಸಾಹ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆಶೀರ್ವಾದ ಪಡೆಯುವುದು ನನ್ನ ಕರ್ತವ್ಯ. ಹೀಗಾಗಿ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯಲು ಬಂದಿದ್ದೇನೆ. ಅವರು ಬೆಂಗಳೂರು ಇತಿಹಾಸವೆಂಬ ಪುಸ್ತಕ ನೀಡಿದ್ದಾರೆ. ಕೃಷ್ಣ ಅವರು ಬಹಳ ದೂರದೃಷ್ಟಿಯಿಂದ ಈ ಪುಸ್ತಕ ನೀಡಿದ್ದಾರೆ.
ಮಳೆಗೆ ಬ್ಯಾಟರಾಯನಪುರದಲ್ಲಿ 27 ವರ್ಷದ ಯುವಕ ಕೊಚ್ಚಿ ಹೋಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಿನ್ನೆ ರಾತ್ರಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಇಂತಹ ದುರ್ಘಟನೆಯ ನಡೆಯುತ್ತಿರುವುದು ದುರಾದೃಷ್ಟಕರ. ನಾವು ಎಲ್ಲೇ ಇದ್ದರೂ ಕಾಲುವೆಗಳ ಬಳಿ ಬಹಳ ಜಾಗೃತವಾಗಿ ಇರಬೇಕು. ಈ ಹಿಂದೆ ಕೇಂದ್ರ ಸರ್ಕಾರ ನರ್ಮ್ ಯೋಜನೆ ಮೂಲಕ ನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಹಳ ನೆರವು ನೀಡಿದ್ದರು. ಈಗಲೂ ನಗರಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಎಷ್ಟರ ಮಟ್ಟಿಗೆ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದು ನೋಡಬೇಕಿದೆ. ಇನ್ನು ನಗರದ ಪ್ರಮುಖ ಅಂಡರ್ ಪಾಸ್ ಗಳ ಕುರಿತು ವರದಿ ತರಿಸಿಕೊಡು ಈ ಪ್ರದೇಶಗಳಲ್ಲಿ ಈ ರೀತಿ ಆಗದ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿದೆ. ಪ್ರತಿಯೊಂದು ಜೀವ ಕಾಪಾಡುವುದು ನಮ್ಮ ಕರ್ತವ್ಯ’ ಎಂದು ತಿಳಿಸಿದರು.