ಬೆಳಗಾವಿ: ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ವೀರ ಸೇನಾನಿ ಸಂಗೊಳ್ಳಿ ರಾಯಣ್ಣ ಸೇರಿದಂತೆ ಒಟ್ಟು ಏಳು ಜನರನ್ನು ನಂದಗಡದಲ್ಲಿ ನೇಣಿಗೆ ಹಾಕಲಾಗಿದೆ. ರಾಯಣ್ಣ ಸಮಾಧಿ ಸ್ಥಳವನ್ನು ಅಭಿಪಡಿಸಿದಂತೆ ಉಳಿದ ಆರು ಹುತಾತ್ಮರ ಸಮಾಧಿ ಸ್ಥಳಗಳನ್ನು ಕೂಡ ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ನಂದಗಡ ರೂರಲ್ ಎಜುಕೇಷನ್ ಸೊಸೈಟಿ ಮೈದಾನದಲ್ಲಿ ಸೋಮವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ, ಸಮಾಧಿ ಬಳಿಯ ಕೆರೆಯಲ್ಲಿ ಕ್ರಾಂತಿವೀರ ರಾಯಣ್ಣ ಪ್ರತಿಮೆ ಲೋಕಾರ್ಪಣೆಗೊಳಿಸಿ ಹಾಗೂ ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಯಣ್ಣನ ಹೆಸರು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ. 2024ರಲ್ಲಿ ಸಂಗೊಳ್ಳಿಯಲ್ಲಿ ಶೌರ್ಯಭೂಮಿ ಹಾಗೂ ಸೈನಿಕ ಶಾಲೆಯನ್ನು ಉದ್ಘಾಟಿಸಲಾಗಿದೆ. ರಾಯಣ್ಣನ ಹುಟ್ಟೂರಾದ ಸಂಗೊಳ್ಳಿ ಹಾಗೂ ಅವರನ್ನು ನೇಣು ಹಾಕಿದಂತಹ ನಂದಗಡ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ದೇಶಪ್ರೇಮಿಯಾಗಿದ್ದು ಅವರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಸಂಗೊಳ್ಳಿ ಹಾಗೂ ನಂದಗಡವನ್ನು ಪ್ರವಾಸಿ ತಾಣವನ್ನಾಗಿಸುವ ಉದ್ದೇಶದೊಂದಿಗೆ ಈ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಾಗುವುದು. ವೀರಭೂಮಿಯಲ್ಲಿ ಸಂಗೊಳ್ಳಿ ರಾಯಣ್ಣ ಅವರ ಬದುಕು ಹಾಗೂ ಹೋರಾಟದ ವಿವಿಧ ಮಜಲುಗಳನ್ನು ಶಿಲ್ಪಕಲಾಕೃತಿಗಳ ಮೂಲಕ ಅನಾವರಣಗೊಳಿಸಲಾಗಿದೆ ಎಂದರು.
ಸರಕಾರ ಮುಂಬರುವ ದಿನಗಳಲ್ಲಿ ಸಂಗೊಳ್ಳಿ ಮತ್ತು ನಂದಗಡವನ್ನು ಅಭಿವೃದ್ಧಿಪಡಿಸಿ ಪ್ರವಾಸಿತಾಣವಾಗಿ ರೂಪಿಸಲಿದೆ.
ಪ್ರತಿಯೊಬ್ಬರು ದೇಶಪ್ರೇಮ ಬೆಳೆಸಿಕೊಂಡು ಸಂವಿಧಾನವನ್ನು ರಕ್ಷಿಸಬೇಕಿದೆ. ಶಿಕ್ಷಣದಿಂದ ಸಮಾನ ಅವಕಾಶ ಸಾಧ್ಯವಾಗಿದೆ. ಆದ್ದರಿಂದ ಶಿಕ್ಷಣ, ಸ್ವಾಭಿಮಾನ ಮತ್ತು ಜ್ಞಾನ ನಮ್ಮೆಲ್ಲರ ಅಭಿವೃದ್ಧಿಗೆ ಸಹಕಾರಿ. ಗುಲಾಮಗಿರಿತನ ಕಿತ್ತೆಸೆಯಬೇಕಾಗಿದೆ..
ಸಂಗೊಳ್ಳಿಯ ಸೈನಿಕ ಶಾಲೆಯಲ್ಲಿ 388 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ದೇಶದ ಪ್ರಜಾಪ್ರಭುತ್ವ, ಸಂವಿಧಾನನವನ್ನು ಉಳಿಸುವ ಕಾರ್ಯವಾಗಬೇಕು. ಶಿಕ್ಷಣ ಹಾಗೂ ಸ್ವಾಭಿಮಾನದೊಂದಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು.
ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡಬೇಕು. ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡುವಂತಹ ವಾತಾವರಣವನ್ನು ಸೃಷ್ಟಿ ಮಾಡಬೇಕಾಗಿದೆ. ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಹೋರಾಟದ ಬದುಕು ಹಾಗೂ ಅವರ ಇತಿಹಾಸವನ್ನು ತಿಳಿಸುವ ನಿಟ್ಟಿನಲ್ಲಿ ವೀರಭೂಮಿ ನಿರ್ಮಾಣಕ್ಕೆ 2013ರಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಇದೀಗ ಕನಸು ನನಸಾಗಿದೆ. ನಂದಗಡ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರವಾಸಿ ತಾಣವಾಗುವುದರ ಜೊತೆಗೆ ರಾಯಣ್ಣನ ಇತಿಹಾಸ ದೇಶಕ್ಕೆ ತಿಳಿಸುವಂತಹ ಕಾರ್ಯ ವೀರಭೂಮಿಯಲ್ಲಿ ಆಗಿದೆ ಎಂದರು.
ವೀರಭೂಮಿಯಿಂದಾಗಿ ಇವತ್ತಿನಿಂದ ಭಾರತದ ಭೂಪಟದಲ್ಲಿ ನಂದಗಡ ವಿಶೇಷ ಸ್ಥಾನ ಪಡೆಯಲಿದೆ ಎಂದರು.
ಲೋಕೋಪಯೋಗಿ ಇಲಾಖೆ ವತಿಯಿಂದ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಈ ಬಾರಿ ಖಾನಾಪುರ ತಾಲೂಕಿನಲ್ಲಿ ಮೂರು ಸೇತುವೆಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನಗಾಥೆಯನ್ನು ನಂದಗಡದಲ್ಲಿ ನಿರ್ಮಿಸುವುದರ ಮೂಲಕ ಮುಂದಿನ ಪೀಳಿಗೆಗೆ ರಾಯಣ್ಣನ ಇತಿಹಾಸ ತಿಳಿಸುವಂತಹ ಮಹತ್ವದ ಕಾರ್ಯ ರಾಜ್ಯ ಸರ್ಕಾರದಿಂದ ಆಗಿದೆ. ಇದು ನಾವೆಲ್ಲರೂ ಹೆಮ್ಮೆಪಡುವ ಸಂಗತಿಯಾಗಿದೆ ಎಂದರು.
ರಾಯಣ್ಣ ಎಂದರೆ ದೇಶಭಕ್ತಿ, ಧೈರ್ಯ, ಸ್ವಾಭಿಮಾನದ ಸಂಕೇತವಾಗಿದೆ. ಇಂದು ಲೋಕಾರ್ಪಣೆಗೊಂಡಂತಹ ವೀರಭೂಮಿಯು ರಾಷ್ಟ್ರಿಯ ಸ್ಮಾರಕವಾಗಲಿ ಎಂದು ಸಚಿವೆ ಹೆಬ್ಬಾಳಕರ್ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಮಾತನಾಡಿ, “ನಂದಗಡದಲ್ಲಿ ಐತಿಹಾಸಿಕ ದಿನವಾಗಿದೆ. ಸಂಗೋಳ್ಳಿ ರಾಯಣ್ಣ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ರಣಕಹಳೆ ಮೊಳಗಿಸಿದ ಮಹಾನ್ ಸೇನಾನಿ ಆಗಿದ್ದರು. ಇವರ ಇತಿಹಾಸವನ್ನು ಮೆಲಕು ಹಾಕುವ ಉದ್ದೇಶದೊಂದಿಗೆ ಸಂಗೊಳ್ಳಿ ಹಾಗೂ ನಂದಗಡ ಗ್ರಾಮಗಳಲ್ಲಿ ವಸ್ತು ಸಂಗ್ರಾಹಲಯಗಳನ್ನು ಸ್ಥಾಪಿಸುವ ಕಾರ್ಯ ನಮ್ಮ ಸರ್ಕಾರದಿಂದ ಆಗಿದೆ. ಮುಂದಿನ ದಿನಮಾನಗಳಲ್ಲಿ ಕಿತ್ತೂರ ಚನ್ನಮ್ಮಹಾಗೂ ಸಂಗೊಳ್ಳಿ ರಾಯಣ್ಣನ ಇತಿಹಾಸ ತಿಳಿದುಕೊಳ್ಳುವ ಕಾರ್ಯ ರಾಜ್ಯ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಲಿದೆ” ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವ ಭೈರತಿ ಎಸ್.ಸುರೇಶ್ ಅವರು ಮಾತನಾಡಿ, ನಂದಗಡದಲ್ಲಿ ವೀರಭೂಮಿ ನಿರ್ಮಾಣದಿಂದಾಗಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರನ್ನು ನೆನಪಿಸಿಕೊಳ್ಳುವ ಕಾರ್ಯವಾಗಿದೆ. ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಪಂಚ ಗ್ಯಾರಂಟಿಗಳನ್ನು ರಾಜ್ಯ ಸರಕಾರದಿಂದ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯದ ಅನುದಾನ ಹಾಗೂ ಸಹಕಾರ ನೀಡಲಾಗುವುದು ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರು, ಸಿಪಾಯಿ ದಂಗೆಗೂ ಮುಂಚೆ ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಯಶೋಗಾಥೆಯನ್ನು ವಿವರಿಸುವ ನಂದಗಡದಲ್ಲಿನ ವೀರಭೂಮಿ ವಸ್ತು ಸಂಗ್ರಾಹಲಯವು ದೇಶದಲ್ಲಿಯೇ ಅತ್ಯುತ್ತಮ ವಸ್ತು ಸಂಗ್ರಹಾಲಯವಾಗುವುದರ ಜೊತೆಗೆ ರಾಷ್ಟ್ರಿಯ ಸ್ಮಾರಕವಾಗಲಿದೆ ಎಂದರು.
ಪ್ರತಿ ಭಾನುವಾರ ಹಾಗೂ ಶನಿವಾರಗಳಂದು ಬೆಳಗಾವಿಯಿಂದ ನಂದಗಡಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಠ್ಠಲ್ ಹಲಗೇಕರ ಅವರು, ಖಾನಾಪುರ ತಾಲೂಕಿನಲ್ಲಿ ನಂದಗಡ ಪವಿತ್ರ ಭೂಮಿಯಾಗಿದೆ. ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಹಾಗೂ ವೀರಭೂಮಿ ಲೋಕಾರ್ಪಣೆಗೊಳಿಸಿವುದು ಹೆಮ್ಮೆಯ ಸಂಗತಿ ಆಗಿದೆ ಎಂದರು.
ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರು ಅಜರಾಮರವಾಗಿದೆ ಎಂದರು. ಖಾನಾಪುರ – ಕಿತ್ತೂರು ರಸ್ತೆ ಅಗಲೀಕರಣ, ಹಂಡಿಬಡಗನಾಥ ದೇವಸ್ಥಾನ ಅಭಿವೃದ್ಧಿ, ಪಿ.ಆರ್.ಡಿ ರಸ್ತೆ ಕಾಮಗಾರಿಗಳಿಗೆ ವಿಶೇಷ ಅನುದಾನ ಹಾಗೂ ಖಾನಾಪುರ ಮತಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನ
ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ರೇವಣಸಿದ್ದೇಶ್ವರ ಸಿಂಹಾಸನಾಧೀಶ್ವರ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಿರಂಜನಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಸರಕಾರಿ ಮುಖ್ಯ ಸಚೇತಕ ಅಶೋಕ ಪಟ್ಟಣ, ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ, ಶಾಸಕರಾದ ವಿಶ್ವಾಸ್ ವೈದ್ಯ, ಗಣೇಶ ಹುಕ್ಕೇರಿ, ಆಸೀಫ್(ರಾಜು) ಸೇಠ್, ಬಾಬಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಲ್ಲಪ್ಪ ಗುರವ, ನೇತ್ರಾ ಲೊಹಾರ್, ಗ್ರಾಮ ಪಂಚಾಯತ ಸದಸ್ಯರುಗಳು, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣ ಚಿಂಗಳೆ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ.ಕೆ.ಎಂ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಹಿಂದುಳಿದ ವರ್ಗಗಳ ಕಲ್ಯಣ ಇಲಾಖೆ ಆಯುಕ್ತ ದಯಾನಂದ .ಕೆ.ಎ., ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಅಧಿಕಾರಿ ಆರ್.ಶಾಲಿನಿ ವಂದಿಸಿದರು.


