ಗೋಕಾಕ :
2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಯುವಕರು ಪಣತೊಡಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಪಣಗುತ್ತಿ, ಪಾಶ್ಚಾಪೂರ, ಪರಕನಹಟ್ಟಿ ಹಾಗೂ ರಾಜಕಟ್ಟಿ ಗ್ರಾಮದ ಮುಖಂಡರು, ಕಾರ್ಯಕರ್ತರು, ಮಹಿಳೆಯರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಮಾಡಿಕೊಂಡು ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೆ ಕೆವಲ 30 ದಿನಗಳು ಬಾಕಿ ಇದ್ದು, ಯಮಕನಮರಡಿ ಮತಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಿಂದ ಮಾತ್ರ ಸರ್ವರ ಸರ್ವತೋಮುಖ ಪ್ರಗತಿ ಸಾಧ್ಯವಿದೆ. ಕಳೆದ 15 ವರ್ಷಗಳಿಂದ ಯಮಕನಮರಡಿ ಮತಕ್ಷೇತ್ರದ ಮನೆಮಗನಾಗಿ ಜನರ ಸೇವೆ ಮಾಡಿದ್ದೇನೆ. ನಿರಂತರ ಜನ ಸಂಪರ್ಕದಲ್ಲಿದ್ದೇನೆ. 2008ಕ್ಕೂ ಹಿಂದೆ ಅಭಿವೃದ್ಧಿಯಲ್ಲಿ ಅತಿ ಹಿಂದುಳಿದ ಕ್ಷೇತ್ರವಾಗಿದ್ದ ಯಮಕನಮರಡಿ ಇಂದು ರಾಜ್ಯದ ಟಾಪ್ ಐದು ಕ್ಷೇತ್ರಗಳ ಪೈಕಿ ಒಂದಾಗಿದೆ. ಇದನ್ನು ಮನಗಂಡ ಜನರು ಅಭೂತಪೂರ್ವ ಬೆಂಬಲ ನೀಡುತ್ತಿರುವುದು ಸಂತಸ ತಂದಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ ಸೇರ್ಪಡೆಯಾದ ಪಣಗುತ್ತಿ, ಪಾಶ್ಚಾಪೂರ, ಪರಕನಹಟ್ಟಿ, ರಾಜಕಟ್ಟಿ ಗ್ರಾಮದ ಮುಖಂಡರು, ಕಾರ್ಯಕರ್ತರು, ಮಹಿಳೆಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯಮಕನಮರಡಿ ಮತಕ್ಷೇತ್ರದ ಪಣಗುತ್ತಿ, ಪಾಶ್ಚಾಪೂರ, ಪರಕನಹಟ್ಟಿ, ರಾಜಕಟ್ಟಿ ಗ್ರಾಮದ ನೂರಾರು ಮುಖಂಡರು, ಕಾರ್ಯಕರ್ತರು ಇದ್ದರು.