ಬೆಳಗಾವಿ:
50% ಸುಳ್ಳು ಹೇಳುವವರ ವಿರುದ್ಧ ಚರ್ಚೆ ಮಾಡಬಹುದು. ಆದರೆ, ಚಕ್ರವರ್ತಿ ಸೂಲಿಬೆಲೆ ರಾಜ್ಯದಲ್ಲಿ ಸುಳ್ಳಿನ ಯುನಿವರ್ಸಿಟಿಯ ವಿಸಿ. ಇಂತವರ ಜತೆ ಚರ್ಚೆ ಮಾಡುವುದರಲ್ಲಿ ಹುರುಳಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ನೂರಕ್ಕೆ.. ಸಾವಿರಷ್ಟು .. ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.
ಇಂತವರ ಜತೆ ಚರ್ಚೆ ಮಾಡುವುದು ಬೇಡ ಎಂಬ ಕುರಿತು ನಮ್ಮ ಕಾರ್ಯಕರ್ತರು ಹಾಗೂ ನಮ್ಮದು ಅಭಿಪ್ರಾಯವಿದೆ ಎಂದು
ಸ್ಪಷ್ಟಪಡಿಸಿದರು.
ಸುಳ್ಳು ಹೇಳುವುದರಲ್ಲಿ ಸೂಲಿಬೆಲೆ ನಿಸ್ಸಿಮ: ಚಕ್ರವರ್ತಿ ಸೂಲಿಬೆಲೆ ಸವಾಲಿಗೆ ನಾನು ಸಿದ್ದನಿದ್ದು, ಹಿಂದೂ ಪದ ಎಲ್ಲಿಂದ ಹೇಗೆ ಬಂತು ಎಂಬುವುದು ಚರ್ಚೆ ನಡೆಯಲಿ, ಈ ವಿಷಯ ಚರ್ಚೆ ಕುರಿತು ಅರಿತುಕೊಳ್ಳುವ ಕಾತುರ ನನಗೂ ಇದೆ. ಆದರೆ, ಈ ಸುಳ್ಳಿನ ಸರದಾರ ಜತೆ ಚರ್ಚೆ ಮಾಡುವುದು ಎಷ್ಟು ಸರಿ ಎಂಬುವುದು ನಮಗೆ ಗೊತ್ತಿದೆ ಎಂದು ಸೂಲಿಬೆಲೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಚಾಟಿ ಬೀಸಿದರು.
ಸೂಲಿಬೆಲೆ ಅವರು 10 ವರ್ಷಗಳ ಹಿಂದೆ ಹೇಳಿರುವ ಹೇಳಿಕೆಯನ್ನು ನಾವು ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಚಿನ್ನದ ರಸ್ತೆ ಎಲ್ಲಿದೇ ಎಂಬುವುದನ್ನು ಹುಡುಕಬೇಕಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ಊಟಕ್ಕೆ ಬೆಂಗಳೂರು ಬರಬೇಕು. ಡಾಲರ್ ಹಾಗೂ ಆಸ್ಪತ್ರೆಗಳನ್ನು ಲ್ಯಾಪ್ ಟಾಪ್ ನಲ್ಲಿ ಹುಡುಕಿ ರೋಗಿಯ ಸ್ಥಿತಿಗತಿಯನ್ನು ನೋಡುವುದನ್ನು ಎಲ್ಲಿ ಮಾಡಿದ್ದಾರೆ ಎಂಬುವುದು ನೋಡಬೇಕಿದೆ. ಅವರು ಹೇಳಿದರಲ್ಲಿ ಯಾವುದಾದರೂ ಒಂದು ಸತ್ಯವಿದ್ದರೂ ನಾನು ಚರ್ಚೆಗಿಳಿಯಲು ಸಿದ್ದ ಎಂದು ಸವಾಲೆಸೆದರು.
ವಿಜಯಪುರದಲ್ಲಿ ನಿಮ್ಮದು ಸಮಾವೇಶ ಮಾಡುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯಪುರದಲ್ಲಿ ಸಮಾವೇಶ ಮಾಡಬೇಕೆಂಬ ಸನ್ನಿವೇಶ ನಮಗಿಲ್ಲ,
ನಮ್ಮದೇ ಆದ ವೇದಿಕೆಗಳು ಸಾಕಷ್ಟಿವೆ. ಗೋಕಾಕ ಹಾಗೂ ವಿಜಯಪುರದಲ್ಲಿ ನಿಂತು ವಿರೋಧಿಗಳಿಗೆ ತಕ್ಕ ಉತ್ತರ ಎಲ್ಲಿ ಬೇಕಾದರೂ ನಿಂತೂ ಹೇಳಿದರೂ ಅವರಿಗೆ ತಟ್ಟುತ್ತದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಯಮಕನಮರಡಿಯಿಂದಲೇ ಸ್ಪರ್ಧೆ ಖಚಿತ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದಲೇ ಅಭ್ಯರ್ಥಿಯಾಗಿ ಪುನಃ ಕಣಕ್ಕಿಳಿಯಲಾಗುವುದು. ಆದ್ದರಿಂದ ಪಕ್ಷ ಸಂಘಟನೆಗಾಗಿ ನಾನು ಸದಾ ಸಿದ್ಧನಿದ್ದೇನೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ ಎಂದರು.