ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ ಸ್ವಪ್ನಿಲ್ ಕುಸಾಲೆ ಪುರುಷರ 50 ಮೀ. ರೈಫಲ್ 3 ಪೊಸಿಶನ್ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕ ಸಂಖ್ಯೆ ಮೂರಕ್ಕೇರಿದೆ. ಈ ಮೂರು ಪದಕ ಒಲಿದದ್ದು ಶೂಟಿಂಗ್ ವಿಭಾಗದಲ್ಲಿ.
ಗುರುವಾರ ನಡೆದ 50 ಮೀ. ರೈಫಲ್ 3 ಪೊಸಿಶನ್ ಫೈನಲ್ ಪಂದ್ಯದಲ್ಲಿ ಸ್ವಪ್ನಿಲ್ ಅವರು 451.4 ಅಂಕ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಸ್ವಪ್ನಿಲ್ ಫೈನಲ್ ಪಂದ್ಯದ ಪ್ರೋನ್ನಲ್ಲಿ 156.8, ನೀಲಿಂಗ್ನಲ್ಲಿ 153.3 ಮತ್ತು ಸ್ಟ್ಯಾಂಡಿಂಗ್ನಲ್ಲಿ 195 ಅಂಕಗಳಿಸಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ್ಕಕೆ ಕೊರಳೊಡ್ಡಿದರು. 463.6 ಅಂಕ ಗಳಿಸಿದ ಚೀನಾದ ಲಿಯು ಯುಕುನ್ ಚಿನ್ನ ಮತ್ತು ಉಕ್ರೇನ್ನ ಕುಲಿಶ್ ಸೆರ್ಹಿ(461.3) ಬೆಳ್ಳಿ ಪದಕ ಗೆದ್ದರು.
ಬುಧವಾರ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್ ಕುಸಾಲೆ 7ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದರು. ಭೋಪಾಲ್ನಲ್ಲಿ ನಡೆದಿದ್ದ ಕೊನೆಯ ಅರ್ಹತಾ ಸುತ್ತಿನಲ್ಲಿ ಅವರು ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಪಡೆದಿದ್ದರು. 2015ರ ಕುವೈತ್ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ ಜೂನಿಯರ್ ವಿಭಾಗದಲ್ಲಿ ಚಿನ್ನ, 59ನೇ ಹಾಗೂ 61ನೇ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲೂ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. 50 ಮೀ. ರೈಫಲ್ 3 ಪೊಸಿಶನ್ನ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ರೈಲ್ವೆ ಟಿಕೆಟ್ ಕಲೆಕ್ಟರ್ :
ಮಹಾರಾಷ್ಟ್ರದ ಕೊಲ್ಲಾಪುರದ ಕಂಬಳವಾಡಿ ಗ್ರಾಮದ 28 ವರ್ಷದ ಸ್ವಪ್ನಿಲ್ ಕುಶಲೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಅವರ ಅಪಟ್ಟ ಅಭಿಮಾನಿ. ಜತೆಗೆ ಧೋನಿಯಂತೆಯೇ ಇವರು ರೇಲ್ವೆ ಟಿಕೆಟ್ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಧೋನಿಯವರ ಬಯೋಪಿಕ್ ಸಿನೆಮಾವನ್ನು ಪದೇ ಪದೇ ವೀಕ್ಷಿಸಿದ ಬಳಿಕ ಸ್ವಪ್ನಿಲ್ ಪೂರ್ಣಪ್ರಮಾಣದಲ್ಲಿ ಶೂಟಿಂಗ್ನಲ್ಲಿ ತೊಡಗಿಕೊಂಡರು. ಧೋನಿಯವರಂತೆ ಶಾಂತ ಸ್ವಭಾವದ ಈ ಶೂಟರ್ ಇದೀಗ ಒಲಿಂಪಿಕ್ಸ್ ಪದಕವೊಂದನ್ನು ಗೆದ್ದು ಇತಿಹಾಸದ ಪುಟ ಸೇರಿದ್ದಾರೆ.