ಬೆಳಗಾವಿ : ಸಾಹಿತ್ಯ, ಸಂಗೀತ, ಕಲೆಯ ಶ್ರೀಮಂತಿಕೆಯ ಪರಂಪರೆಯನ್ನು ಸಹೃದಯರಿಗೆ ತಲುಪಿಸುವ ಸುಂದರ ಕಲಾರೂಪವಾದ ಗಮಕ ಕಲೆಯು ಜ್ಞಾನ ಭಾವಗಳ ಸಂಗಮವಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ. ಎಂ. ತ್ಯಾಗರಾಜ ಅವರು ಅಭಿಪ್ರಾಯಪಟ್ಟರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಪಿ. ಎಮ್. ಉಷಾ ಮೇರು ಯೋಜನೆಯ ಅಡಿಯಲ್ಲಿ ಕುಮಾರವ್ಯಾಸ ಕಾವ್ಯದ ಊರ್ವಶಿ ಶಾಪ ಪ್ರಸಂಗ ಕಾವ್ಯ ಭಾಗದ ಮೇಲೆ ಹಮ್ಮಿಕೊಂಡಿದ್ದ ಗಮಕ ಕಾವ್ಯ ವ್ಯಾಖ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಮಾರವ್ಯಾಸ ಭಾರತ ಕನ್ನಡದ ಶಾಸ್ತ್ರ್ರೀಯ ಕೃತಿಗಳಲ್ಲಿ ಒಂದು. ಕಾವ್ಯದಲ್ಲಿ ಭಕ್ತಿ, ನೀತಿ, ಧರ್ಮ ಮತ್ತು ತತ್ವಶಾಸ್ತ್ರದಂಥ ಉದಾತ್ತ ಚಿಂತನೆಗಳಿವೆ. ಜನಸಾಮಾನ್ಯರ ಬಗ್ಗೆ ಮಿಡಿಯುವ ಈ ಕಾವ್ಯ ಕನ್ನಡದ ಅಮರ ಕಾವ್ಯವಾಗಿದೆ. ಕನ್ನಡದ ಶ್ರೀಮಂತ ಸಂಸ್ಕೃತಿಯ ಹೂರಣವನ್ನು ಕುಮಾರವ್ಯಾಸ ಭಾರತ ಒಳಗೊಂಡಿದೆ. ಆ ಕಾವ್ಯದ ಅನುಸಂಧಾನ ನಮ್ಮ ಭವ್ಯ ಪರಂಪರೆಯ ಮುಖಾಮುಖಿಯಾದಂತೆ. ವಿದ್ಯಾರ್ಥಿಗಳು ಇಂತಹ ಮಹೋನ್ನತ ಕಾವ್ಯವನ್ನು ಓದಿದಾಗಲೇ ಅವರ ಬೌದ್ಧಿಕ ಚಿಂತನೆಗಳು ಪ್ರಬುದ್ಧತೆಯನ್ನು ಪಡೆಯಲಿವೆ, ಅವರು ಓದಿನ ಹರವು ವಿಸ್ತಾರವಾಗಲಿವೆ. ಶಬ್ದ ಭಂಡಾರವನ್ನು ಒಳಗೊಂಡ ಈ ಕೃತಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೌರಭವನ್ನು ವಿದ್ಯಾರ್ಥಿಗಳು ರಸಹ್ರಹಣ ಮಾಡಬೇಕು.
ವಿದ್ಯಾರ್ಥಿಗಳು ಸಾಹಿತ್ಯ ಸಂಗೀತ ಕಲೆಯನ್ನು ಆಸ್ವಾದಿಸಬೇಕು ಹಾಗೂ ಆರಾಧಿಸಬೇಕು. ಯಕ್ಷಗಾನ, ಗಮಕ, ನಾಟಕಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬಹುಮುಖ್ಯ ಎಂದರು. ವಿದುಷಿ ಡಾ ಶ್ಯಾಮಲಾ ಪ್ರಕಾಶ ಮತ್ತು ಖ್ಯಾತ ಗಮಕಿಗಳಾದ ಸಂತೋಷ ಭಾರದ್ವಾಜ್ ಅವರು ನಾಡು ಕಂಡ ಅದ್ವಿತೀಯ ಗಮಕ ಮತ್ತು ವ್ಯಾಖ್ಯಾನಕಾರರೆಂದು ಶ್ಲಾಘಿಸಿದರು.
ಕುಮಾರವ್ಯಾಸ ಭಾರತದ ಉರ್ವಶಿಯ ಶಾಪ ಪ್ರಸಂಗವನ್ನು ವಿದುಷಿ ಡಾ ಶ್ಯಾಮಲಾ ಪ್ರಕಾಶ ಅವರು ಸುಮಧುರ ಕಂಠದಲ್ಲಿ ಹಾಡಿದರು. ಖ್ಯಾತ ಗಮಕಿಗಳಾದ ಸಂತೋಷ ಭಾರದ್ವಾಜ ಅವರು ವ್ಯಾಖ್ಯಾನ ಮಾಡಿ ಸಂದರ್ಭಗಳನ್ನು ಸ್ವಾರಸ್ಯಕರವಾಗಿ ವಿವರಿಸಿದರು.
ರಾ.ಚ.ವಿ. ಕುಲಸಚಿವರಾದ ಸಂತೋಷ ಕಾಮಗೌಡ ಅವರು ಗಮಕ ಕಲೆ ನಮ್ಮ ನೆಲದ ಸೊಬಗು, ನಮ್ಮ ಬೌದ್ಧಿಕ ವಿಕಸನದ ರೂಪಕವಾಗಿದೆ. ಇದು ಕೇವಲ ಸಂಗೀತಮಾತ್ರವಲ್ಲದೇ ಇದು ಸಾಹಿತ್ಯ ಮತ್ತು ವಾಚನದ ಕಲೆಯಾಗಿದೆ ಎಂದರು.
ಕಾರ್ಯಕ್ರಮದ ಸಂಯೋಜಕಿ ಡಾ ಶೋಭಾ ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಿ. ಎಂ. ಉಷಾ ಮೇರು ನೋಡಲ್ ಅಧಿಕಾರಿ ಡಾ. ನಂದಿನಿ ದೇವರಮನಿ ಸ್ವಾಗತಿಸಿದರು. ಪ್ರೊ. ಎಸ್. ಎಂ. ಗಂಗಾಧರಯ್ಯ, ಡಾ. ಮಹೇಶ ಗಾಜಪ್ಪನವರ, ಡಾ ಗಜಾನನ ನಾಯ್ಕ, ಡಾ. ಸಂಜೀವಣ್ಣನವರ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಡಾ. ಪಿ. ನಾಗರಾಜ ವಂದಿಸಿದರು. ಸುಪ್ರಿಯಾ ಕಲಾಚಂದ್ರ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.