ಬೆಳಗಾವಿ : ಪ್ರಸ್ತುತ ಸಂದರ್ಭದಲ್ಲಿ ಜ್ಞಾನ ಎಲ್ಲದಕ್ಕಿಂತಲೂ ಮಿಗಿಲಾದುದು, ಜ್ಞಾನವೇ ಭವಿಷ್ಯದ ದೀಪಸ್ತಂಭ ಎಂದು ರಾಜಸ್ಥಾನದ ಅಜ್ಮೇರ್ ನ ಎನ್. ಸಿ. ಇ. ಆರ್. ಟಿ. ಯ ಸಹಾಯಕ ಪ್ರಾಧ್ಯಾಪಕ ಡಾ. ಅನಂತ ಎಸ್ ನಾಯಕ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದಿಂದ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ ವರ್ಷಾಚರಣೆಯ ನಿಮಿತ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಸಮಕಾಲೀನ ಸಂದರ್ಭದಲ್ಲಿ ಕ್ವಾಂಟಮ್ ವಿಜ್ಞಾನ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ. ಕ್ವಾಂಟಮ್ ಸಿದ್ಧಾಂತದ ಹುಟ್ಟು ಹಾಗೂ ಶಾಸ್ತ್ರೀಯ ಭೌತಶಾಸ್ತ್ರದಿಂದ ಕ್ವಾಂಟಮ್ ಭೌತಶಾಸ್ತ್ರವಾಗಿ ಪರಿವರ್ತನೆಯಾದ ಬಗೆಯನ್ನು ವಿವರಿಸಿದರು. ಇದು ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು ಸಾಂಪ್ರದಾಯಿಕ ಕಂಪ್ಯೂಟರ್ಗಳಿಗಿಂತ ಹೆಚ್ಚು ವೇಗವಾಗಿ ಪರಿಹರಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ತಂತ್ರಜ್ಞಾನವು ಭವಿಷ್ಯವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಹಲವು ನಿದರ್ಶನಗಳ ಮೂಲಕ ತೋರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗ್ಡೆ ಅವರು, ಜಗತ್ತಿನ ಆವಿಷ್ಕಾರಗಳು ವಿಜ್ಞಾನದ ಕೊಡುಗೆ. ವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಬಹು ದೊಡ್ಡ ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಲಾವಣ್ಯ ಬಿ. ಗುಂಜಾಳ ಪ್ರಾಸ್ತಾವಿಕವಾಗಿ ಮಾಡಿದರು. ಜ್ಯೋತಿ ಭೋವಿ ಸ್ವಾಗತಿಸಿದರು. ಗೀತಾ ಪಿ. ಜೆ. ಪರಿಚಯಿಸಿದರು. ರೂಪಾ ಮಲಗೌಡರ್ ನಿರೂಪಿಸಿದರು. ಡಾ. ಬಸವರಾಜ ಗುರವ ವಂದಿಸಿದರು. ವಿದ್ಯಾರ್ಥಿನಿ ಪಾರ್ವತಿ ಮೇತ್ರಿ ಪ್ರಾರ್ಥಿಸಿದರು. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.