ಬೆಂಗಳೂರು :
ಕೆಲ ದಿನಗಳ ಹಿಂದೆ ನಡೆದ ಕೆಎಂಎಫ್ ನೇಮಕಾತಿಯಲ್ಲಿ ಈ ಬಾರಿ ಗೋಲ್ ಮಾಲ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ನೇಮಕ ಬರುವ ದಿನಗಳಲ್ಲಿ ಬಾರಿ ಸದ್ದು ಮಾಡುವ ಸೂಚನೆ ಲಭಿಸಿದೆ. ಯಾಕೆಂದರೆ ಈಗಾಗಲೇ ರಾಜ್ಯಾದ್ಯಂತ ವಿವಿಧ ಹಗರಣಗಳು ರಾಜ್ಯದ ಬಿಜೆಪಿ ಸರಕಾರವನ್ನು ಇನ್ನಿಲ್ಲದಂತೆ ಸುತ್ತಿಕೊಂಡಿವೆ. ವಿಧಾನಸಭಾ ಚುನಾವಣೆಗೂ ಮುನ್ನ ಈ ನೇಮಕಾತಿ ಪ್ರಕ್ರಿಯೆ ಹಗರಣ ಬಿಜೆಪಿ ಸರಕಾರಕ್ಕೆ ಕಳಂಕ ತರುವ ಸಾಧ್ಯತೆ ಇದೆ.
ಅಮುಲ್ ಸಹಭಾಗಿತ್ವ ಹೊಂದಿರುವ ಗುಜರಾತ್ ಮೂಲದ ಇನ್ಸ್ಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ ಆನಂದ್ (ಐಆರ್ ಎಂಎ) ಎಂಬ ಖಾಸಗಿ ಕಂಪನಿ ಕೆಎಂಎಫ್ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸಿದೆ. ಆದರೆ, ಆರ್ಹ ಅಭ್ಯರ್ಥಿಗಳನ್ನು ಕೈಬಿಟ್ಟಿದೆ ಎಂಬ ಆರೋಪ ವ್ಯಕ್ತವಾಗಿದೆ. ನ್ಯಾಯಯುತವಾಗಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ, ಹಲವು ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ, ಹೀಗಾಗಿ ರಾಜ್ಯ ಸರಕಾರ ತಕ್ಷಣ ತನಿಖೆಗೆ ಮುಂದಾಗಬೇಕು ಎಂದು ಕೆಲ ಅಭ್ಯರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ವಿವಿಧ ವೃಂದಗಳ 487 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಈ ಸಲ ಗುಜರಾತ್ ಮೂಲದ ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ ಆನಂದ ಕಂಪನಿ ಡಿಸೆಂಬರ್ 18 ರಂದು ವಿವಿಧ ವೃಂದಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಆನಂತರ ಹಂತ ಹಂತವಾಗಿ ಕೀ ಉತ್ತರ ಪ್ರಕಟಿಸಲಾಗಿತ್ತು. ಈ ನಡುವೆ ಜನವರಿ 25 ರಂದು ರಾತ್ರಿ 11ಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಫೆಬ್ರವರಿ 2 ರಿಂದ ಸಂದರ್ಶನಕ್ಕೆ ಕರೆಯಲಾಗಿದೆ. ಸಂದರ್ಶನ ಮತ್ತು ಅಂಕಗಳ ಮಾಹಿತಿ ನೀಡದೆ ಇರುವುದು ಅನುಮಾನಗಳಿಗೆ ಗುರಿಯಾಗಿದೆ. ಈ ಬಗ್ಗೆ ಕೆಲ ಪರೀಕ್ಷೆ ಬರೆದ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 18 ರಂದು 200 ಅಂಕಗಳಿಗೆ ಪರೀಕ್ಷೆ ನಡೆಸಲಾಗಿದ್ದು ಅನಂತರ 111 ಅಂಕ ಕಟಾಫ್ ಅಂತಿಮಗೊಳಿಸಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಅಹ್ವಾನಿಸಬೇಕಿತ್ತು. ನಾನು ಸಂದರ್ಶನಕ್ಕೆ ಆರ್ಹನಾಗಿದ್ದರು ನನಗೆ ಮಾತ್ರ ಯಾವುದೇ ಸಂದರ್ಶನಕ್ಕೆ ಆಹ್ವಾನಿಸಲಿಲ್ಲ.
ಈ ಬಗ್ಗೆ ಅಧಿಕಾರಿಗಳು ಸರಿಯಾದ ಉತ್ತರವನ್ನು ನೀಡುತ್ತಿಲ್ಲ ಎಂದು ಅಭ್ಯರ್ಥಿಯೊಬ್ಬರು ತಮಗೆ ಆಗಿರುವ ಅನ್ಯಾಯವನ್ನು ತೋಡಿಕೊಂಡರು.
ಅಭ್ಯರ್ಥಿಗಳ ಪಟ್ಟಿಯನ್ನು ಜನವರಿ 25 ರಂದು ರಾತ್ರಿ ಏಕಾಏಕಿಯಾಗಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ಪ್ರಶ್ನೆ ಮಾಡಲು ಅವಕಾಶ ಇಲ್ಲದಂತೆ ವ್ಯವಸ್ಥಿತವಾಗಿ ಸಮಯ ನಿಗದಿಪಡಿಸಿರುವುದು ಅನುಮಾನ ಹುಟ್ಟಿಸಿದೆ. ಜನವರಿ 25ರ ಮರುದಿನ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆದಿದೆ. ನಂತರ ಒಂದು ದಿನ ಕಚೇರಿ ಜ. 27 ರಂದು ತೆರೆದಿದ್ದರು. ಜನವರಿ 28 ರಂದು ಕಡೆಯ ಶನಿವಾರ ರಜೆ. ಜನವರಿ 29 ರಂದು ರವಿವಾರ. ಆದ್ದರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಡಲಿಲ್ಲ ಎನ್ನುವುದು ಮತ್ತೊಬ್ಬರು ದೂರಿದ್ದಾರೆ.
ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಮೀಸಲಾತಿ ಇದ್ದರೂ ಯಾವುದೇ ರೀತಿಯಲ್ಲೂ ಅವರನ್ನು ಪರಿಗಣಿಸಿಲ್ಲ. ಈ ಕುರಿತು ಹಲವು ಬಾರಿ ಪ್ರಶ್ನೆ ಮಾಡಲು ಮುಂದಾದರೂ ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಬಗ್ಗೆ ನಮಗೆ ಯಾವ ಅಧಿಕಾರ ಇಲ್ಲ, ಗುಜರಾತಿನ ಸಂಬಂಧಿಸಿದ ಕಂಪನಿಗೆ ಕೇಳಿ ಎಂದು ಹೇಳಿ ಕಳಿಸಿದರು ಎಂದು ಬೆಳಗಾವಿಯ ಅಭ್ಯರ್ಥಿಯೊಬ್ಬರು ತಮಗೆ ಆಗಿರುವ ಅನ್ಯಾಯವನ್ನು ಪತ್ರಿಕೆ ಮುಂದೆ ಬಿಚ್ಚಿಟ್ಟಿದ್ದಾರೆ.