ಜನ ಜೀವಾಳ ಜಾಲ: ಬೆಳಗಾವಿ: ವಿದ್ಯಾರ್ಥಿಗಳ ಮುಖದಲ್ಲಿ ಸದಾ ಮುಗುಳ್ನಗೆ ಹಾಗೂ ಆತ್ಮವಿಶ್ವಾಸ ತುಂಬಿಕೊಂಡಿರಬೇಕು ಜೊತೆಗೆ ಸಕಾರಾತ್ಮಕ ಚಿಂತನೆಗಳಿದ್ದರೆ ಜೀವನದಲ್ಲಿ ದೊಡ್ಡ ಕನಸು ಈಡೇರಿಸಿಕೊಳ್ಳಲು ಸಾಧ್ಯ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಹಾಗೂ ಹಾಸ್ಯ ಕಲಾವಿದ ಎಂ.ಬಿ.ಹೊಸಳ್ಳಿ ಹೇಳಿದರು.
ಕೆ.ಎಲ್.ಇ ಸಂಸ್ಥೆಯ ಗಿಲಗಂಚಿ ಅರಟಾಳ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಕಾಲೇಜು ಒಕ್ಕೂಟ ಮತ್ತು ಎನ್.ಎಸ್.ಎಸ್. ಕಾರ್ಯಚಟುವಟಿಕೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಾವು ಜೀವಂತವಿರುವಾಗಲೇ ಸ್ವರ್ಗವನ್ನು ಸೃಷ್ಟಿಸುವ ರೀತಿಯಲ್ಲಿ ತಮ್ಮ ಕನಸನ್ನು ಈಡೇರಿಸಿಕೊಳ್ಳಬಹುದು. ಸ್ವಾಮಿ ವಿವೇಕಾನಂದರಲ್ಲಿದ್ದ ಆತ್ಮ ವಿಶ್ವಾಸ ಸಕಾರಾತ್ಮಕ ಚಿಂತನೆಗಳನ್ನು ನಾವೆಲ್ಲ ಬೆಳೆಸಿಕೊಂಡರೆ ಜೀವನದಲ್ಲಿ ಸಾಧನೆ ಮಾಡಬಹುದಾಗಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಾಧನೆ ಮಾಡಬೇಕೆಂದರು.
ಮೊಬೈಲನಿಂದ ಸಂಬಂಧಗಳು ದೂರವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಸಾಧನೆಯ ಪಥದತ್ತ ಮುನ್ನುಗ್ಗಬೇಕು. ಜೀವನದಲ್ಲಿ ಹಾಸ್ಯವನ್ನು ಆಸ್ವಾದಿಸುವ ಕಲೆಯನ್ನು ಅಳವಡಿಸಿಕೊಂಡರೆ ನಮ್ಮೆಲ್ಲರ ಜೀವನ ಸುಂದರವಾಗುತ್ತದೆ. ನಗುವನ್ನೇ ನಾವೆಲ್ಲ ಮರೆತಿದ್ದೇವೆ. ನಗುವೇ ಬಹುದೊಡ್ಡ ಟಾನಿಕ್. ನಿತ್ಯ ಜೀವನದಲ್ಲಿ ನಗು, ಹಾಸ್ಯಪ್ರಜ್ಞೆ ಅತ್ಯಂತ ಅವಶ್ಯಕ ಎಂದು ಹೇಳಿದರು.
ಸರಳ ಸುಂದರವಾಗಿರುವ ಕನ್ನಡ ಅತ್ಯಂತ ಸಮೃದ್ಧ ಭಾಷೆ. ಎರಡು ಸಾವಿರಕ್ಕೂ ಹೆಚ್ಚು ವರುಷಗಳ ಇತಿಹಾಸ ಹೊಂದಿದೆ. ಇತರ ಭಾಷೆಗಳನ್ನುಕಲಿಯುವುದರ ಜತೆಗೆ ಕನ್ನಡದ ಬಗ್ಗೆ ಪ್ರೀತಿ ಅಭಿಮಾನ ಬೆಳೆೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಭಾಷಾ ಪ್ರೀತಿಯೊಂದಿಗೆ ಪರಿಶ್ರಮದಿಂದ ಮುನ್ನಡೆದಲ್ಲಿ ಅಸಾಧ್ಯತೆ ಸಾಧ್ಯವಾಗುತ್ತದೆ.
ಪ್ರಾಚಾರ್ಯ ರವೀಂದ್ರ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತಾಸೆಯಾಗಿ ನಿಲ್ಲುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಹೊರತರುವ ಮೂಲಕ ಭವಿಷ್ಯದಲ್ಲಿ ಏಳ್ಗೆ ಹೊಂದಬೇಕೆಂದರು.
ವೇದಿಕೆ ಮೇಲೆ ಒಕ್ಕೂಟದ ಅಧಕ್ಷ ಟಿ.ಪಿ.ಬಾನಕರ , ಉಪ ಪ್ರಾಚಾರ್ಯ ಸಿ.ಪಿ. ದೇವಋಷಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಬಲರಾಮ ಪಾಟೀಲ, ಗಂಗೋತ್ರಿ ಪಾಟೀಲ ಹಾಜರಿದ್ದರು. ಸೃಷ್ಟಿ ಬೆಳಗಾವಕರ ಸಂಗಡಿಗರು ಪ್ರಾರ್ಥಿಸಿದರು. ಸಕ್ಕುಬಾಯಿ ಸ್ವಾಗತಗೀತೆ ಹಾಡಿದರು. ವಿ. ಆರ್. ನೀರಲಕಟ್ಟಿ ವಂದಿಸಿದರು. ಎಸ್.ಸಿ. ನೀರಲಗಿ ಹಿರೇಮಠ ಹಾಗೂ ಎಂ.ಎನ್. ಶೆಟ್ಟೆನ್ನವರ ನಿರೂಪಿಸಿದರು. ಸೋಮು ಮಡಿವಾಳರ ಪರಿಚಯಿಸಿದರು.