ಬೆಳಗಾವಿ : ದತ್ತ ಜಯಂತಿ ಅಂಗವಾಗಿ ಕಳೆದ ದಿ. 5 ಡಿಸೆಂಬರ 2025 ರಂದು ಏರ್ಪಡಿಸಲಾದ ಮಹಪ್ರಸಾದದ ಸಂದರ್ಭದಲ್ಲಿ ಸಂಶಯಿತ ವಿಷಯುಕ್ತ ಆಹಾರ ಸೇವಿಸಿ ಸುಮಾರು 200ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಮಾಹಿತಿಯು ಲಭಿಸಿದ ತಕ್ಷಣ ಕೆಎಲ್ಇ ಸಂಸ್ಥೆಯ ಕಾರ್ಯಾದ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ಸಲಹೆ ಮೇರಗೆ ವೈದ್ಯರ ತಂಡವು ಘಟನೆ ನಡೆದ ಗಡಹಿಂಗ್ಲಜ ತಾಲೂಕಿನ ಸಾಂಬರೆ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಚಿಕಿತ್ಸೆ ನೀಡಿ ಅವರು ಶೀಘ್ರ ಗುಣಮುಖರಾಗಲು ಶ್ರಮವಹಿಸಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯ ಮಾಜಿ ಶಾಸಕ ರಾಜೇಶ ಪಾಟೀಲ ಅವರು, ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಗೆ ವೈದ್ಯರ ತಂಡ ಹಾಗೂ ಅಗತ್ಯ ಔಷಧೋಪಚಾರವನ್ನು ಕಲ್ಪಿಸುವಂತೆ ಕೋರಿಕೊಂಡಾಗ, ತಕ್ಷಣ ಸ್ಪಂಧಿಸಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ದಯಾನಂದ ಹಾಗೂ ಡಾ. ಮಾಧವ ಪ್ರಭು ಅವರ ಮುಂದಾಳತ್ವದಲ್ಲಿ ತಂಡವನ್ನು ಮಾಡಿ ಅಗತ್ಯ ಸಿಬ್ಬಂದಿಗಳನ್ನು ಕಳುಹಿಸಲಾಯಿತು. ಅಲ್ಲದೇ ಆಸ್ಪತ್ರೆಯಲ್ಲಿ ಅಗತ್ಯವಿರುವ ತೀವ್ರ ನಿಗಾ ಘಟಕ ಹಾಗೂ ಹಾಸಿಗೆಗಳನ್ನು ಮೀಸಲಿಟ್ಟು ಕಾರ್ಯಪ್ರವೃತ್ತರಾದರು.
20 ವೈದ್ಯರು, 10 ನರ್ಸಿಂಗ ಸಿಬ್ಬಂದಿ, 5 ಅಂಬ್ಯುಲನ್ಸ್ ಹಾಗೂ ಅಗತ್ಯ ಔಷಧಗಳ ಮೂಲಕ ಕೇವಲ ಒಂದು ಘಂಟೆಯಲ್ಲಿ ಘಟನಾ ಸ್ಥಳಕ್ಕೆ ತಲುಪಿದ ತಂಡವು ಅಸ್ವಸ್ಥಗೊಂಡ ಭಕ್ತಾದಿಗಳಿಗೆ ಅವಶ್ಯವಿರುವ ಚಿಕಿತ್ಸೆ ನೀಡಿದರು. ಸಮಯಕ್ಕೆ ಸರಿಯಾಗಿ ಅಸ್ವಸ್ಥಗೊಂಡ ಭಕ್ತಾದಿಗಳಿಗೆ ಚಿಕಿತ್ಸೆ ನೀಡಿ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಿರುವದಕ್ಕೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿ ಸದಸ್ಯರು ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕರ್ನಲ್ ಎಂ ದಯಾನಂದ ಅವರಿಗೆ ಶಾಸಕರಾದ ಶಿವಾಜಿ ಪಾಟೀಲ ಮಾಜಿ ಶಾಸಕ ರಾಜೇಶ ಪಾಟೀಲ ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.


