ಜನ ಜೀವಾಳ ಜಾಲ: ಬೆಳಗಾವಿ:ಶಿಕ್ಷಣದ ಕ್ರಾಂತಿ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ . ಬಸವಣ್ಣನವರ ಕಾಯಕ ದಾಸೋಹ ಹಾಗೂ ಇವನ್ಯಾರವ ಎನ್ನದೇ ಕೋಟ್ಯಾಂತರ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ ಸಂಸ್ಥೆಯು ಸರಕಾರದ ಮಾಡದ ಒಳ್ಳೆಯ ಕಾರ್ಯದಲ್ಲಿ ನಿರತರಾಗಿರುವದು ಅತ್ಯಂತ ಶ್ಲಾಘನೀಯ, ರಾಜ್ಯದ ಪ್ರತಿಯೊಂದು ಮೂಲೆಯಲ್ಲಿಯೂ ಕೆಎಲ್ಇ ಶಿಕ್ಷಣ ಸಂಸ್ಥೆಗಳು ನಿರ್ಮಾಣವಾಗಲಿ
– ಸೋಮಣ್ಣ, ಉಗಿಬಂಡಿ ಮಂತ್ರಿ

ಹೃದಯ ಶ್ರೀಮಂತಿಕೆಯಿಂದ ಎಲ್ಲ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಕೆಎಲ್ಇ ಸಂಸ್ಥೆಯ ಸಪ್ತರ್ಷಿಗಳು, ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ನಾಡಿಗೆ ತೋರಿಸಿಕೊಟ್ಟಿದ್ದಾರೆ ಎಂದು ಕೇಂದ್ರ ಉಗಿಬಂಡಿ ಹಾಗೂ ಜಲಶಕ್ತಿ ಮಂತ್ರಿ ವಿ ಸೋಮಣ್ಣ ಹೇಳಿದರು.
ಕೆಎಲ್ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಸಂಸ್ಥೆಯ ಆಡಳಿತದ ಕಾರ್ಯವೈಖರಿ ಹಾಗೂ ಅಭಿವೃದ್ಧಿಗೆ ಸಪ್ತರ್ಷಿಗಳ ಆಶೀರ್ವಾದ ಸದಾ ಇದೆ. ಈಗಾಗಲೇ ಉತ್ತರ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿದ್ದು, ದಕ್ಷಿಣ ಕರ್ನಾಟಕದಲ್ಲಿ ಒಳ್ಳೆಯ ಶಿಕ್ಷಣ ಮತ್ತು ಸೌಲಭ್ಯಗಳನ್ನು ನೀಡಲು ಆ ಭಾಗದಲ್ಲಿಯೂ ಕೂಡ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಬೇಕು. ದೇಶ ವಿದೇಶದಲ್ಲಿ ಸಾಧನೆ ಮಾಡುವಲ್ಲಿ ಕೆಎಲ್ಇ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದಿದ್ದಾರೆ. ಯಾವುದೇ ಭಾಗಕ್ಕೆ ಹೋದರೂ ಇಲ್ಲಿನ ವಿದ್ಯಾರ್ಥಿಗಳು ಸಿಗುತ್ತಾರೆ. ಸಂಸ್ಥೆಗಳನ್ನು ಕಟ್ಟಿ ಬೆಳೆಸುವದು ಅತ್ಯಂತ ಕಠಿಣ, ಒಳ್ಳೆಯ ಶಿಕ್ಷಣ ನೀಡಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಕೆಎಲ್ಇ ಸಂಸ್ಥೆಯು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಡಾ. ಪ್ರಭಾಕರ ಕೋರೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರೆ ರಾಜ್ಯವು ಸಂಪುರ್ಣ ಸುಶಿಕ್ಷಿತ ಮತ್ತು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗುತ್ತಿತ್ತು ಎಂದ ಅವರು, ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಸಂಸ್ಥೆಯಾಗಿದೆ. ದೇಶದಲ್ಲಿ ಅತ್ಯುತ್ತಮ ಸಂಸ್ಥೆಯಾಗಿ ಬೆಳೆಯಲಿ, ಶಿಕ್ಷಣ, ಆರೋಗ್ಯ, ಕೃಷಿ ಸಂಶೋಧನಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೈಯಲಿ ಎಂದು ಶುಭ ಹಾರೈಸಿದರು.
ನಾನೂ ಈ ಮಟ್ಟಕ್ಕೆ ಬೆಳೆಯುವಲ್ಲಿ ಡಾ. ಕೋರೆ ಅವರ ಪಾತ್ರ ಬಹಳಷ್ಟಿದೆ. ಆದ್ದರಿಂದಲೇ ಸದಾ ಪ್ರಾರ್ಥಿಸುತ್ತ ಅವರನ್ನು ನೆನೆಯುತ್ತೇನೆ. ಅವರೊಬ್ಬ ಅಜಾತ ಶತ್ರು ಎಂದ ಅವರು,ಬೆಳಗಾವಿ ನಗರದಲ್ಲಿರುವ ಎಲ್ಲ ರೇಲ್ವೆ ಗೇಟಗಳಿಗೆ ಮೇಲ್ಸುತುವೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿನ ಯೋಜನೆಗಳನ್ಬು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಬೆಳಗಾವಿ- ಧಾರವಾಡ ರೇಲ್ವೆ ಲೈನ ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ತಿಳಿಸಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಸಪ್ತ ಋಷಿಗಳು ಅತ್ಯಂತ ಕಷ್ಟದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು, ಅನೇಕ ದಾನಿಗಳ ಸಹಾಯ ಸಹಕಾರವನ್ನು ಅಂತೆ ಸಂಸ್ಥೆಯು ದಾನಿಗಳು ಹಾಗೂ ಮಹಾದಾನಿಗಳಿಂದ ಬೆಳೆದು ನಿಂತಿದೆ. ಅಂದು ಅವರು ತಮ್ಮ ಎಲ್ಲಾ ಕಷ್ಟಗಳನ್ನ ಬದಿಗಿರಿಸಿ ಜನ ಕಲ್ಯಾಣಕ್ಕಾಗಿ ಶೈಕ್ಷಣಿಕ ದಾಸೋಹವನ್ನು ಗೈದರು. ಆದ್ದರಿಂದಲೇ ಇಂದು ಸಂಸ್ಥೆ ಜಾಗತಿಕವಾಗಿ ವಿಸ್ತರಿಸಲು ಸಾಧ್ಯವಾಗಿದೆ. ಎಲ್ಲ ರೀತಿಯ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದೆ. ಎಲ್ಲರ ಸಹಕಾರದಿಂದ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
ಬೆಳಗಾವಿ – ಪುಣೆ ಹಾಗೂ ಬೆಳಗಾವಿ – ಬೆಂಗಳೂರು ವಂದೇ ಭಾರತ ಟ್ರೇನ್ ಪ್ರಾರಂಭಿಸಿ. ಬೆಳಗಾವಿ -ಕಿತ್ತೂರ – ಧಾರವಾಡ ಕಾಮಗಾರಿ ಮುಗಿಸಿ ರೈಲು ಸಂಚಾರ ಆರಂಭಿಸಿ ಎಂದು ಸೋಮಣ್ಣ ಅವರನ್ನು ಒತ್ತಾಯಿಸಿದರು. ಡಿಸೆಂಬರ ತಿಂಗಳಲ್ಲಿ 300 ಹಾಸಿಗೆಗಳ ಕ್ಯಾನ್ಸರ ಆಸ್ಪತ್ರೆಯನ್ನು ರಾಷ್ಟ್ರಪತಿ ಅವರು ಜನಸೇವೆ ಅರ್ಪಿಸಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದ ಗೌರವ ಅತಿಥಿಗಳಾಗಿ ಆಗಮಿಸಿದ ಪುಣೆಯ ರುಬಿ ಹಾಲ್ ಕ್ಲಿನಿಕನ ಮ್ಯಾನೆಜಿಂಗ ಟ್ರಸ್ಟಿ ಹಾಗೂ ಮುಖ್ಯ ಹೃದ್ರೋಗ ತಜ್ಞವೈದ್ಯರಾದ ಡಾ. ಫರ್ವೇಜ್ ಕೆ ಗ್ರಾಂಟ, ವೈದ್ಯಕೀಯ ಕ್ಷೇತ್ರದಲ್ಲಿ ಮುಖ್ಯವಾಗಿ ತಂತ್ರಜ್ಞಾನದ ಬಳಕೆ ಹೆಚ್ಚಾಗಬೇಕು. ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಯು ಸುಲಭವಾಗಿ ಸಿಗುವಂತಾಗಬೇಕು. ಅದಕ್ಕೆ ತಕ್ಕಂತೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಎನ್ನುವದಕ್ಕಿಂತ ಮಾರುಕಟ್ಟೆ ವಿಸ್ತರಣೆ ಮಾಡಬೇಕು ಎಂದ ಅವರು, ವೈದ್ಯಕೀಯ ಸೇವೆಯನ್ನು ಗ್ರಾಮೀಣ ಭಾಗದಲ್ಲಿ ಸಿಗುವಂತಾಗಬೇಕು ಎಂದ ಅವರು, 50 ವರ್ಷಗಳ ಹಿಂದೆ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಳೆದ ವಿದ್ಯಾರ್ಥಿ ಜೀವನವನ್ನು ಮೆಲಕು ಹಾಕಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ವಹಿಸಿದ್ದರು.
ಡಾ ಮಹೇಶ್ ಗುರನಗೌಡರ, ನೇಹಾ ದಡೇದ್, ಡಾ ಆದಿತ್ಯ ಆಚಾರ್ಯ ನಿರೂಪಿಸಿದರು. ಕೆಎಲ್ಇ ಆಜೀವ ಸದಸ್ಯ ಮಂಡಳಿಯ ಕಾರ್ಯಾಧ್ಯಕ್ಷರಾದ ಡಾ. ದೀಪಾ ಮೆಟಗುಡ್ಡ್ ವಂದಿಸಿದರು. 150ಕ್ಕೂ ಹೆಚ್ಹು ರಾಷ್ಟ್ರೀಯ ಅಂತರಾಷ್ಟ್ರೀಯ ರಾಜ್ಯಮಟ್ಟದಲ್ಲಿ ಸಾಧನೆಗೈ ದಂತಹ ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡಿ ಹತ್ತು ಜನ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರಿಗೂ ಕೂಡ ಸನ್ಮಾನಿಸಲಾಯಿತು.