ಬೆಳಗಾವಿ : ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ, ಲಿಂಗಾಯತ ಮಹಿಳಾ ಸಮಾಜ ಬೆಳಗಾವಿ, ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಕನ್ನಡ ಭವನ ನೆಹರು ನಗರ ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಉದ್ಘಾಟನೆ ನೆರವೇರಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮುಕ್ತಾಂಬ ಬಸವರಾಜ ಮಾತನಾಡಿ, ಬೆಳಗಾವಿ ಜಿಲ್ಲೆ ಐತಿಹಾಸಿಕವಾಗಿ ಅತ್ಯಂತ ಮಹತ್ವವನ್ನು ಪಡೆದುಕೊಂಡು ತನ್ನದೇ ಆದ ಇತಿಹಾಸವನ್ನು ಸೃಷ್ಟಿಸಿದೆ. ಕಿತ್ತೂರು ಚನ್ನಮ್ಮಳ ತ್ಯಾಗಮಯ ಜೀವನ ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ. ಹೆಸರಾಂತ ಲೇಖಕಿಯರು, ಜಾನಪದ ಕಲಾವಿದರು, ಸಮಾಜ ಸೇವಕಿಯರು, ಮಹಿಳಾ ಹೋರಾಟಗಾರರು ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ತೊಡಗಿಸಿಕೊಂಡಿರುವುದನ್ನು ನಾವು ಕಾಣುತ್ತೇವೆ ಎಂದರು.
ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿ ದಿ.ಸುಶೀಲಾಬಾಯಿ ಜ. ಕುಲಕರ್ಣಿಯವರ ಹೋರಾಟದ ಬದುಕು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯ ಬಗ್ಗೆ ಪ್ರೊ.ವಿನೀತಾ ಗೆಜ್ಜೆಯವರು ಉಪನ್ಯಾಸವನ್ನು ಮಾಡಿದರು. ಖ್ಯಾತ ರಂಗ ನಿರ್ದೇಶಕಿ ಧಾರವಾಡ ವಿಶ್ವೇಶ್ವರಿ ಬ ಹಿರೇಮಠ ಅವರು ಜಾನಪದ ಕಲೆಯ ಮಹತ್ವದ ಬಗ್ಗೆ ತಿಳಿಸಿ, ಜಾನಪದ ಗೀತೆಗಳನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಇಂದು ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ಸಿಕ್ಕಿದೆಯೆಂದರೆ, ಅದು ಹನ್ನೆರಡನೆಯ ಶತಮಾನದ ಬಸವಣ್ಣನವರು ಮಾಡಿದ ಸಾಮಾಜಿಕ ಸುಧಾರಣೆಯ ಪ್ರತಿಫಲವಾಗಿದೆ. ಆದ್ದರಿಂದ ಎಲ್ಲ ಮಹಿಳೆಯರು ಜೀವನದಲ್ಲಿ ಬರುವ ಸಮಸಸ್ಯೆಗಳನ್ನು ದಿಟ್ಟತನದಿಂದ ಎದುರಿಸಬೇಕು. ಮಹಿಳೆಯರಿಂದಲೇ ಸಮಾಜದ ಸರ್ವೋತೋಮುಖ ಅಭಿವೃದ್ಧಿ ಸಾಧ್ಯ. ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಮುಂದಾಳತ್ವವನ್ನು ವಹಿಸಿದ್ದಾಳೆ. ಜೀವನವೆಂಬ ಸಾಗರದಲ್ಲಿ “ಈಜಬೇಕು ಇದ್ದು ಜಯಿಸಬೇಕು.” ಎಂದು ಸ್ಫೂರ್ತಿಯ ಮಾತುಗಳನ್ನಾಡಿದರು.
ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕಿ ಶೈಲಜಾ ಭಿಂಗೆ ನಿರೂಪಿಸಿದರು. ಮಹಿಳಾ ಸಾಧಕಿಯರಾದ ರಾಷ್ಟ್ರಪ್ರಶಸ್ತಿ ವಿಜೇತರಾದ ಶಾಂತಾದೇವಿ ಹುಲೆಪ್ಪನವರಮಠ, ರಾಧಿಕಾ ಮಿರ್ಜಿ, ನೀಲಂ ಗುತ್ತಿಗೋಳಿ, ಜೋತ್ಸ್ನಾ ಪೈ, ಸುರೇಖಾ ಪಾಟೀಲ, ಪಾರ್ವತಿ, ದಾನಮ್ಮ ಹಿಡದುಗ್ಗಿ, ಜಯಶ್ರೀ ಬಂಡಿವಡ್ಡರ ಸುನೀತಾ ಸರ್ವದೆ ಮುಂತಾದವರನ್ನು ಸನ್ಮಾನಿಸಲಾಯಿತು. ಆಶಾ ಕಡಪಟ್ಟಿ, ಜಿಲ್ಲಾ ಮಹಿಳಾ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ, ಡಾ:ಗುರುದೇವಿ ಹುಲೆಪ್ಪನವರಮಠ, ಡಾ:ಭಾರತಿ ಮಠದ ಮುಂತಾದ ಮಹಿಳಾ ಸಾಹಿತಿಗಳು ಉಪಸ್ಥಿತರಿದ್ದರು.
ಡಾ:ಸುನೀತಾ ಪಾಟೀಲ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು.
ಡಾ:ಹೇಮಾವತಿ ಸೊನೊಳ್ಳಿ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು. ಲಿಂಗಾಯತ ಮಹಿಳಾ ಸಮಾಜದ ಎಲ್ಲ ಸದಸ್ಯರು, ಜಿಲ್ಲಾ ಲೇಖಕಿಯರ ಸಂಘದ ಸರ್ವ ಸದಸ್ಯರು ಆಗಮಿಸಿದ್ದರು.