ಬೆಳಗಾವಿ :
ಜಿಲ್ಲಾ ಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದ ಕಿತ್ತೂರು ಉತ್ಸವವನ್ನು ಈ ವರ್ಷದಿಂದ ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸುವ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಆರ್ ಸಿ ಯು ಅಭಿವೃದ್ಧಿಪರ ಹೋರಾಟ ಸಮಿತಿಯು ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಎಲ್ಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಿತ್ತೂರು ಉತ್ಸವವನ್ನು ಆಚರಿಸಬೇಕೆಂದು ಆಗ್ರಹಿಸಿದೆ.
ಈ ಕುರಿತಂತೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿ ಪರ ಹೋರಾಟ ಸಮಿತಿಯು ಕುಲಪತಿಗಳಿಗೆ ಮನವಿಯನ್ನು ಸಲ್ಲಿಸಿದೆ. ಡಾ. ಕೆ.
ಡಿ .ದೇಶಪಾಂಡೆ ನೇತೃತ್ವದ ನಿಯೋಗ ಕುಲಪತಿ ರಾಮಚಂದ್ರಗೌಡ ಅವರನ್ನು ಭೇಟಿ ಮಾಡಿ ಹೋರಾಟದ ಹಿನ್ನೆಲೆಯಿಂದಲೇ ಅಸ್ತಿತ್ವಕ್ಕೆ ಬಂದಿರುವ ಆರ್
ಸಿ ಯು ಗಡಿಭಾಗದ ಜ್ಞಾನ ದೇಗುಲ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರ ರಾಣಿ ಕಿತ್ತೂರು ಚೆನ್ನಮ್ಮಾಜಿ ಈ ದೇಶದ ಸ್ವಾಭಿಮಾನದ ಸಂಕೇತ, ಹಾಗಾಗಿ ಸರ್ಕಾರವು ಬ್ರಿಟಿಷರ ವಿರುದ್ಧ ಹೋರಾಡಿ ಜಯ ಘೋಷ ಮೊಳಗಿಸಿದ ದಿನದಂದು ಅಕ್ಟೋಬರ್ 23ರಂದು ಚನ್ನಮ್ಮಾಜಿಯ ಗೌರವಾರ್ಥ ಕಿತ್ತೂರು ಉತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಆದ್ದರಿಂದ ಈ ಉತ್ಸವವು ಕೇವಲ ಜಿಲ್ಲಾಡಳಿತ ಹಾಗೂ ರಾಜಕಾರಣಿಗಳಿಗೆ ಸೀಮಿತವಾಗದೆ ಜಯಂತೋತ್ಸವ ಆಗಬೇಕು. ಆದ್ದರಿಂದ ವೀರಮಾತೆ ಇತಿಹಾಸ ಕಿತ್ತೂರಿನ ಸ್ವಾಭಿಮಾನದ ಕಿಡಿಗಳಾದ ಬಿಚ್ಚು ಕತ್ತಿಯ ಚೆನ್ನಬಸಪ್ಪ , ಗಜವೀರ ,ಅಮಟೂರು ಬಾಳಪ್ಪ, ಸರ್ದಾರ ಗುರುಸಿದ್ಧ ,ಸಂಗೊಳ್ಳಿ ರಾಯಣ್ಣ ,ಬೆಳವಡಿಯ ವಡ್ಡರ ಎಲ್ಲರನ್ನು ಸೇರಿದಂತೆ ಆಂಗ್ಲರ ವಿರುದ್ಧ ಬಂಡೆದ್ದು ಹೋರಾಡಿದ ಅಸಂಖ್ಯಾತ ಸೇನಾನಿಗಳ ಬಗ್ಗೆ ಯುವ ಸಮೂಹಕ್ಕೆ ಗೊತ್ತಾಗಬೇಕು.
ಈ ಬಗ್ಗೆ ಸಂಶೋಧನೆಗಳು ನಡೆಯಬೇಕು. ಇತಿಹಾಸದ ಗರ್ಭದಲ್ಲಿ ಕೂತು ಹೋಗಿರುವ ಅದೆಷ್ಟೋ ವಿಷಯಗಳು ಬೆಳಕಿಗೆ ಬಂದು ಯುವಸಮೂಹದಲ್ಲಿ ದೇಶಾಭಿಮಾನ ಬೆಳೆಯಬೇಕು. ಕಿತ್ತೂರಿನ ಹೋರಾಟಗಾರರಿಗೆ ಗೌರವ ಸಲ್ಲುವಂತಾಗಬೇಕು.
ಆದ್ದರಿಂದ ಈ ಸತ್ಕಾರ್ಯಗಳು ಚಾಲನೆಯನ್ನು ಪಡೆಯುವಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಾತ್ರವು ಬಹು ಮುಖ್ಯವಾಗಿದೆ. ವಿಶ್ವವಿದ್ಯಾಲಯ ಕಾರ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಿತ್ತೂರಿನ ಪಾತ್ರ ದ ಬಗ್ಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನಿಶೀಲರಾಗಬೇಕಿದೆ.
ಕಿತ್ತೂರಿನ ಇತಿಹಾಸವನ್ನು ಸಾರುವ ವೇಷ ಭೂಷಣ ,ವಿಚಾರ ಸಂಕಿರಣ, ಉಪನ್ಯಾಸ ,ಜನಪದ ಗೀತೆಗಳು, ಚಿತ್ರಕಲೆ ,ನಾಟಕ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಕಿತ್ತೂರು ಉತ್ಸವ ವಿದ್ಯಾರ್ಥಿಗಳ ಉತ್ಸವ ವಾಗಬೇಕು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದಶಮಾನೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕಿತ್ತೂರು ಉತ್ಸವಕ್ಕೆ ನಮ್ಮ ವಿಶ್ವವಿದ್ಯಾಲಯವು ಹಿಂತಾ ವಿಶೇಷವಾದ ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಲಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿಗಳಿಗೆ ನಿಯೋಗದ ಮುಖಂಡರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಕುಲಪತಿ ರಾಮಚಂದ್ರಗೌಡ ಈ ಬಗ್ಗೆ ಶೀಘ್ರವೇ ಕ್ರಿಯಶೀಲರಾಗುವದಾಗಿ ನಿಯೋಗದ ಮುಖಂಡರಿಗೆ ಭರವಸೆಯನ್ನು ನೀಡಿದರು.
ಡಾ.ಕೆ.ಡಿ. ದೇಶಪಾಂಡೆ, ಡಾ.ಅಡಿವೆಪ್ಪ ಇಟಗಿ, ಸಾಹಿತಿ ಸ.ರಾ.ಸುಳಕೂಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ. ವೈ. ಮೆಣಸಿನಕಾಯಿ, ಹೋರಾಟ ಸಮಿತಿಯ ಸದಸ್ಯ ಮತ್ತು ಪ್ರಾಚಾರ್ಯ ಬಸವರಾಜ ಮಠಪತಿ ಮುಂತಾದವರು ಉಪಸ್ಥಿತರಿದ್ದರು.