ಬೆಳಗಾವಿ : ಬಾಲಕಿಗೆ ಮದುವೆಯಾಗುವ ವಯಸ್ಸು ಆಗದೇ ಇದ್ದರೂ ಆಕೆಯನ್ನು ಅಪಹರಿಸಿ ಮದುವೆ ಮಾಡಿಕೊಳ್ಳುವ ಯತ್ನ ವಿಫಲವಾಗಿದೆ.
ಅಥಣಿ ಮೂಲದ ಅಪ್ರಾಪ್ತೆಯನ್ನು ಅಪಹರಿಸಿ ಮತಾಂತರಕ್ಕೆ ಯತ್ನ ನಡೆಸಿದ್ದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಅಥಣಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಿ ಅಪ್ರಾಪ್ತೆಯನ್ನು ರಕ್ಷಿಸಲಾಗಿದೆ. ಶಾಹಿಲ್ ಬಂಧಿತ ಆರೋಪಿ. ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಅಪ್ರಾಪ್ತೆಯನ್ನು ತನ್ನ ಸಂಬಂಧಿಕರ ಹುಡುಗಿಯ ಮೂಲಕವಾಗಿ ಆರೋಪಿ ಶಾಹಿಲ್ ಪರಿಚಯಿಸಿಕೊಂಡಿದ್ದ. ಮುಂದೊಂದು ದಿನ ಇಡೀ ದೇಶ ಮುಸ್ಲಿಂ ರಾಷ್ಟ್ರವಾಗಲಿದೆ. ನೀನು ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುವುದಾಗಿ ಮೈಂಡ್ ವಾಶ್ ಮಾಡಿದ್ದ. ಸಂಬಂಧಿಕರ ಹುಡುಗಿ ಮೂಲಕವೂ ಅಪ್ರಾಪ್ತೆಗೆ ಮೈಂಡ್ ವಾಶ್ ಮಾಡಿದ್ದ.
ವಾರದ ಹಿಂದೆ ಅಥಣಿಯಿಂದ ಅಪ್ರಾಪ್ತೆಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದಿದ್ದ. ಜನವರಿ 18 ಕ್ಕೆ ಅಪ್ರಾಪ್ತೆಗೆ 18 ವರ್ಷ ತುಂಬುವುದರಲ್ಲಿತ್ತು. ಬಳಿಕ ಆಕೆಯನ್ನು ಮದುವೆಯಾಗುವ ಯೋಚನೆ ಮಾಡಿದ್ದ ಎನ್ನಲಾಗಿದೆ. ಮಗಳು ಮನೆಗೆ ಬಾರದಿರುವುದು ಕಂಡು ಗಾಬರಿಯಾದ ಪೋಷಕರು ಅಥಣಿ ಠಾಣೆಯಲ್ಲಿ ದೂರು ನೀಡಿದ್ದರು. ಮೊಬೈಲ್ ಫೋನ್ ಗೆ ಶಾಹಿಲ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಕಳುಹಿಸಿದ್ದ ಮೆಸೇಜ್ ಗಳು ಪತ್ತೆಯಾಗಿದ್ದವು.
ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಬಂಧನಕ್ಕೆ ಎರಡು ವಿಶೇಷ ತಂಡ ರಚಿಸಿದ್ದರು. ಆರೋಪಿ ಅಪ್ರಾಪ್ತೆಯನ್ನು ಬೆಂಗಳೂರಿಗೆ ಕರೆದೊಯ್ದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಬೆಂಗಳೂರಿಗೆ ಆಗಮಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಹಿಲ್ ಕಪಿಮುಷ್ಟಿಯಲ್ಲಿದ್ದ ಅಪ್ರಾಪ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ.


