ಧಾರವಾಡ: ಧಾರವಾಡದ ಕಮಲಾಪುರ ಶಾಲೆಯಿಂದ ಕಿಡ್ನ್ಯಾಪ್ ಆಗಿದ್ದ ಇಬ್ಬರು ಮಕ್ಕಳು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ ಹಾಗೂ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಧಾರವಾಡದ ಕಮಲಾಪುರ ಸರ್ಕಾರಿ ಶಾಲೆಯ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಒಬ್ಬ ಬಾಲಕ ಮತ್ತು ಒಬ್ಬಳು ಬಾಲಕಿಯನ್ನು ಸೋಮವಾರ ಮಧ್ಯಾಹ್ನ ಊಟದ ವಿರಾಮದ ವೇಳೆ ವ್ಯಕ್ತಿಯೊಬ್ಬ ಬೈಕ್ ಮೇಲೆ ಕೂಡ್ರಿಸಿಕೊಂಡು ಪರಾರಿಯಗಿದ್ದ ಎಂದು ಹೇಳಲಾಗಿದ್ದು, ಕಮಲಾಪುರದ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿವೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅವರು ಎಲ್ಲಾ ಕಡೆ ತಕ್ಷಣವೇ ಮಾಹಿತಿ ರವಾನಿಸಿ, ಹುಡುಕಾಟ ಆರಂಭಿಸಿದ್ದರು.
ಪೊಲೀಸರು ಮಕ್ಕಳಿಗಾಗಿ ಹುಡುಕಾಟದಲ್ಲಿದ್ದಾಗ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಜೊಯಿಡಾ ಬಳಿ ಬೈಕ್ ಅಪಘಾತಕ್ಕೀಡಾಗಿರುವುದು ಗೊತ್ತಾಗಿದೆ. ಈ ಬೈಕ್ ಮೇಲೆ ಒಬ್ಬ ವ್ಯಕ್ತಿ ಹಾಗೂ ಇಬ್ಬರು ಮಕ್ಕಳಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಕ್ಕಳನ್ನು ಮಾತನಾಡಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ವ್ಯಕ್ತಿಯ ವಿಚಾರಣೆ ನಡೆಸಿದಾಗ ಆತ ಧಾರವಾಡ ನಗರದ ಅಬ್ದುಲ್ ಕರೀಂ ಎಂಬುದು ತಿಳಿದಿದೆ. ಈ ವೇಳೆ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಅಪಘಾತದಲ್ಲಿ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಧಾರವಾಡ ಉಪನಗರ ಠಾಣೆ ಪೊಲೀಸರ ಒಂದು ತಂಡ ಜೋಯ್ಡಾಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.


