ದೆಹಲಿ :
ಉತ್ತರ ಪ್ರದೇಶದಿಂದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಮೇಠಿಯಿಂದ ರಾಹುಲ್ ಗಾಂಧಿ ಮತ್ತು ವಾರಣಾಸಿಯಿಂದ ಪ್ರಿಯಾಂಕಾ ವಾದ್ರಾ ಅವರನ್ನು’ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯತಂತ್ರ ಹೆಣೆಯಲಾಗಿದೆ. ಪ್ರಿಯಾಂಕಾ ವಾದ್ರಾ ಫುಲ್ಪುರ ಮತ್ತು ವಾರಣಾಸಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ.
ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರ ಪ್ರಭಾವ ಕ್ಷೀಣಿಸುತ್ತಿದೆ. ದಲಿತರ ಮೇಲೆ ಬಿಎಸ್ಪಿ ಹಿಡಿತವೂ ಸಡಿಲಗೊಂಡಿದೆ. ಖರ್ಗೆ ಅವರು ದಲಿತ ಸಮುದಾಯವನ್ನು ಪ್ರತಿನಿಧಿಸುತ್ತಾರೆ. ಮೀಸಲು ಕ್ಷೇತ್ರದಿಂದ ಅವರು ಅಖಾಡಕ್ಕೆ ಇಳಿದರೆ ಗೆಲುವು ಸುಲಭ. ಜೊತೆಗೆ, ದಲಿತರು ಮತ್ತು ಮುಸ್ಲಿಂಮರ ಒಲವು ಸೆಳೆದು ಮತ್ತೆ ಪಕ್ಷವನ್ನು ಹಳೆಯ ವೈಭವದ ಹಳಿಗೆ ತರಬಹುದು ಎಂಬುದು ರಾಜ್ಯ ನಾಯಕರ ಲೆಕ್ಕಾಚಾರ.
‘ಇಟಾವಾ ಅಥವಾ ಬರಾಬಂಕಿ ಲೋಕಸಭಾ (ಎಸ್.ಸಿ) ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಖರ್ಗೆ ಅವರನ್ನು ಕಣಕ್ಕಿಳಿಸಲು ಚಿಂತಿಸಲಾಗಿದೆ. ಖರ್ಗೆ ಅವರ ಸ್ಪರ್ಧೆಯು ರಾಜ್ಯದ ಇತರೆ ಕ್ಷೇತ್ರಗಳಲ್ಲಿ ದಲಿತರ ಮತಗಳನ್ನು ಸೆಳೆಯಲು ‘ಇಂಡಿಯಾ’ಗೆ ನೆರವಾಗಲಿದೆ’ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಆದರೆ, ‘ಖರ್ಗೆ ಅವರು ಉತ್ತರ ಪ್ರದೇಶದಿಂದ ಸ್ಪರ್ಧಿಸುತ್ತಾರೆಯೇ? ಎಂಬ ಪ್ರಶ್ನೆಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಜಯ್ ರೈ ಪ್ರತಿಕ್ರಿಯಿಸಲಿಲ್ಲ. ‘ದಲಿತರ ಮೇಲೆ ಮಾಯಾವತಿ ಅವರ ಹಿಡಿತ ತಪ್ಪಿರುವುದು ದಿಟ. ಕಾಂಗ್ರೆಸ್ನತ್ತ ದಲಿತರನ್ನು ಸೆಳೆಯುವುದರ ಹೊರತಾಗಿ ನಮಗೂ ಬೇರೆ ಯಾವುದೇ ಆಯ್ಕೆಗಳು ಇಲ್ಲ’ ಎಂದು ಉತ್ತರಿಸಿದರು.
ಇತ್ತೀಚೆಗೆ ನಡೆದ ಘೋಸಿ ವಿಧಾನಸಭೆಯ ಉಪ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿದ ಅವರು, ‘ಸಮಾಜವಾದಿ ಪಕ್ಷದ ಅಭ್ಯರ್ಥಿಯು 42 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಮಣಿಸಿದ್ದಾರೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಬಾರದು. ಅದಕ್ಕೆ ಬದಲಾಗಿ ಮತಯಂತ್ರದಲ್ಲಿ ನೋಟಾ ಬಟನ್ ಒತ್ತಿ ಎಂದು ಮಾಯಾವತಿ ಕರೆ ನೀಡಿದ್ದರು. ಆದರೂ, ದಲಿತರು ಆ ಪಕ್ಷದ ಕೈಹಿಡಿದಿದ್ದಾರೆ’ ಎಂದು ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧಿಸುತ್ತಾರೆ ಎಂದು ರೈ ಅವರು ಹಿಂದೆ ಹೇಳಿದ್ದರು. ಈ ಕುರಿತು ಪ್ರಶ್ನೆಗೆ, ‘ಅಮೇಥಿಯಿಂದ ರಾಹುಲ್ ಸ್ಪರ್ಧಿಸಲಿದ್ದಾರೆ’ ಎಂದು ಪುನರುಚ್ಚರಿಸಿದರು. 2009 ಹಾಗೂ 2014ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದಲೇ ರಾಹುಲ್ ಜಯಗಳಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ವಿರುದ್ಧ ಅವರು ಸೋಲು ಅನುಭವಿಸಿದ್ದರು.
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದರೆ ಅವರ ಗೆಲುವಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಲಿದ್ದಾರೆ’ ಎಂದು ರೈ ಹೇಳಿದರು.
‘ಸೋನಿಯಾ ಗಾಂಧಿ ಅವರು ರಾಯ್ಬರೇಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆರೋಗ್ಯದ ಕಾರಣವೊಡ್ಡಿ ಅವರು ಸ್ಪರ್ಧೆಯಿಂದ ಹಿಂದೆ ಸರಿದರೆ ಪ್ರಿಯಾಂಕಾ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.