ಖಾನಾಪುರ : ಕಳೆದ 6 ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಶಿವ ಸ್ಮಾರಕದಿಂದ ಕರಂಬಲ್ ಕ್ರಾಸ್ (ಮೀನು ಮಾರುಕಟ್ಟೆ ಬಳಿ) ವರೆಗಿನ ಪ್ರಮುಖ ರಸ್ತೆ ಮತ್ತೆ ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಗಿದೆ.
ಈ ಕುರಿತು ಶಾಸಕ ವಿಠ್ಠಲ ಹಲಗೇಕರ ಪ್ರತಿಕ್ರಿಯಿಸಿ, ರೈತರ ಸಾಮರಸ್ಯ ಮತ್ತು ಸಹಕಾರದಿಂದ ಯಾವುದೇ ವಿವಾದವಿಲ್ಲದೆ ಈ ಸಮಸ್ಯೆಗೆ ಶಾಂತಿಯುತ ಪರಿಹಾರ ದೊರೆತಿದೆ. ಸಾರ್ವಜನಿಕ ಹಿತಾಸಕ್ತಿ ಮತ್ತು ಗ್ರಾಮೀಣ ಜನರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಭೂಮಿ ನೀಡಿದ ಎಲ್ಲ ರೈತ ಬಂಧುಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.
ರಸ್ತೆಗಾಗಿ ಭೂಮಿ ನೀಡಿದ ರೈತರಿಗೆ ಸರ್ಕಾರದಿಂದ ಸೂಕ್ತ ಆರ್ಥಿಕ ನೆರವು ದೊರಕುವಂತೆ ಮಾಡುವ ಜವಾಬ್ದಾರಿ ನಮ್ಮದು. ಈ ವಿಷಯದಲ್ಲಿ ನಾವು ಸಂಪೂರ್ಣವಾಗಿ ಅವರೊಂದಿಗೆ ನಿಂತು ಸಹಕರಿಸುತ್ತೇವೆ ಎಂಬ ಭರವಸೆ ನೀಡುತ್ತೇನೆ.
ರಸ್ತೆ ಮುಚ್ಚಲ್ಪಟ್ಟಿದ್ದರಿಂದ ಶಾಲಾ ಮಕ್ಕಳು ದೂರದ ಮಾರ್ಗವನ್ನು ಬಳಸಬೇಕಾಗಿತ್ತು, ವ್ಯಾಪಾರಸ್ಥರು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸಿದ್ದರು. ಇದೀಗ ರಸ್ತೆ ತೆರೆಯುವುದರಿಂದ ವಿದ್ಯಾರ್ಥಿಗಳಿಗೆ, ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸಮಯ ಮತ್ತು ಇಂಧನ ಉಳಿತಾಯವಾಗಲಿದೆ.
ರೈತರು ತೋರಿದ ಸಾಮರಸ್ಯದಿಂದ ಖಾನಾಪುರದ ಜನರ ಒಂದು ದೊಡ್ಡ ಸಮಸ್ಯೆ ಬಗೆಹರಿದಿದೆ. ಈ ರಸ್ತೆ ಖಾನಾಪುರದ ಅಭಿವೃದ್ಧಿಗೆ ಪ್ರಮುಖ ದಾರಿ ಆಗಿದೆ ಎಂದು ಅವರು ತಿಳಿಸಿದ್ದಾರೆ.


