ಖಾನಾಪುರ : ಖಾನಾಪುರದ ಪ್ರಮುಖ ಸಂಪರ್ಕ ರಸ್ತೆ ಕಾಮಗಾರಿ ಅರ್ಧದಲ್ಲೇ ನಿಂತಿರುವುದರಿಂದ ವ್ಯಾಪಾರಿಗಳು ಮತ್ತು ನಾಗರಿಕರು ಖಾನಾಪುರಕ್ಕೆ ಬರುವುದು ತೀವ್ರ ತೊಂದರೆಯಾಗುತ್ತಿದೆ. ಮುಚ್ಚಿ ಮಾರ್ಕೆಟ್ ಪ್ರದೇಶದ ಕೆಲ ರೈತರು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದ ಖಾನಾಪುರದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಪರ್ಯಾಯ ಮಾರ್ಗಗಳನ್ನು ಒದಗಿಸುವಂತೆ ಒತ್ತಾಯಿಸಿ ಫೆಬ್ರವರಿ 26ರ ಗುರುವಾರ ಖಾನಾಪುರ ಬಂದ್ ಗೆ ಕರೆ ನೀಡಲಾಗಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಾಮಾಜಿಕ ಕಾರ್ಯಕರ್ತ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹುತ್ ಅವರು, ಗುರುವಾರ ಬೆಳಗ್ಗೆ 10 ರಿಂದ ಜಾಂಬೋಟಿ ಕ್ರಾಸ್ ಬಸವೇಶ್ವರ ಸರ್ಕಲ್ ನಿಂದ ತಹಶೀಲ್ದಾರ್ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆ ಮುಖ್ಯ ಮಾರುಕಟ್ಟೆ, ಚೌರಾಶಿ ದೇವಿ ದೇವಸ್ಥಾನ ಪ್ರದೇಶ ಮತ್ತು ಬಸ್ ನಿಲ್ದಾಣದಲ್ಲಿ ಬಂದ್ ಕುರಿತು ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸುವಂತೆ ಮನವಿ ಮಾಡಲಾಗುತ್ತದೆ. ಖಾನಾಪುರದ ಆರ್ಥಿಕತೆ ದೃಷ್ಟಿಯಿಂದ ಇದೊಂದು ಸ್ವಯಂ ಪ್ರೇರಿತ ಬಂದ್ ಆಗಿರಲಿದೆ ಎಂದು ವಿವರಿಸಿದರು.


