ಬೆಂಗಳೂರು:
ವಿಧಾನಸಭೆಯ ನೂತನ ಸ್ಪೀಕರ್ ಆಗಿ ಯು.ಟಿ ಖಾದರ್ ಬುಧವಾರ ಅಧಿಕಾರ ಸ್ವೀಕರಿಸಿದರು.
ಯು.ಟಿ ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅನುಮೋದಿಸಿದರು.
ಸ್ಪೀಕರ್ ಸ್ಥಾನಕ್ಕೆ ಯು.ಟಿ ಖಾದರ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಸರ್ವಾನುಮತದಿಂದ ಆಯ್ಕೆಯಾದರು.
ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಅವರ ಆದೇಶ ಅನುಸಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪೀಕರ್ ಪೀಠ ಬಳಿಗೆ ಖಾದರ್ ಅವರನ್ನು ಕರೆತಂದರು. ಬಳಿಕ ಶುಭಾಶಯ ಕೋರಲಾಯಿತು.
ಸಿದ್ದರಾಮಯ್ಯ ಹಾಗೂ ಬಸವರಾಜ ಬೊಮ್ಮಾಯಿ ಅವರು ಅಭಿನಂದನಾ ಭಾಷಣ ಮಾಡಿ, ನೂತನ ಸ್ಪೀಕರ್ಗೆ ಶುಭಾಶಯ ಕೋರಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೂತನ ಸಚಿವರನ್ನು ಸದನಕ್ಕೆ ಪರಿಚಯ ಮಾಡಿಕೊಟ್ಟರು.