ಬೆಳಗಾವಿ :
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಫೆ.27 ರಂದು ಬೆಳಗಾವಿಗೆ ಆಗಮಿಸುತ್ತಿದ್ದು ಭಾರೀ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋಗೆ ಅಗತ್ಯ ಸಿದ್ದತೆ ಮಾಡಿಕೊಂಡಿರುವ ಜಿಲ್ಲಾಡಳಿತ ಇದೀಗ ಪೊಲೀಸರ ಮೂಲಕ ಕಟ್ಟುನಿಟ್ಟಿನ ಸೂಚನೆ ರವಾನಿಸುತ್ತಿದೆ.
ಮಾರ್ಗ ಮಧ್ಯೆ ವ್ಯಾಪಾರ ನಡೆಸುವ ಅಂಗಡಿಗಳನ್ನು ಅಂದು ಮುಚ್ಚಬೇಕು ಎಂದು ಪೊಲೀಸರು ಫರ್ಮಾನ್ ಹೊರಡಿಸಿದ್ದಾರೆ. ಫೆಬ್ರವರಿ 27 ರ ಮಧ್ಯಾಹ್ನ ಬೆಳಗಾವಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿ ಉತ್ತರ ಮತ ಕ್ಷೇತ್ರದ ಚನ್ನಮ್ಮ ವೃತ್ತದಿಂದ ಕಾಲೇಜು ರಸ್ತೆ, ರಾಮಲಿಂಗಖಿಂಡಗಲ್ಲಿ, ಕಪಿಲೇಶ್ವರ, ಶಿವಾಜಿ ಉದ್ಯಾನ, ಯಡಿಯೂರಪ್ಪ ಮಾರ್ಗದ ಮೂಲಕ ಮಾಲಿನಿ ಸಿಟಿ ಮೈದಾನದವರೆಗೂ ಭರ್ಜರಿ ರೋಡ್ ಶೋ ಮೂಲಕ ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಈ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿರುವ ತರಕಾರಿ ವ್ಯಾಪಾರಸ್ಥರು ಹಾಗೂ ರಸ್ತೆಗೆ ಹೊಂದಿಕೊಂಡಿರುವ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಜೊತೆಗೆ ಕಾಲೇಜು ರಸ್ತೆ ಸೇರಿದಂತೆ ವಿವಿಧ ಶಾಲಾ-ಕಾಲೇಜು ಬಳಿ ಸಾರ್ವಜನಿಕರ ರಸ್ತೆಯಲ್ಲಿ ಬೈಕ್, ಸೈಕಲ್ ಸೇರಿದಂತೆ ಯಾವುದೇ ವಾಹನ ನಿಲುಗಡೆ ಮಾಡದಂತೆ ಸೂಚಿಸಿರುವ ಪೊಲೀಸರು ಶಿಕ್ಷಣ ಸಂಸ್ಥೆಗಳು ಪರ್ಯಾಯವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದೆ.