ಬೆಳಗಾವಿ :
ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ನೈರ್ಮಲ್ಯಯುಕ್ತ ಭಾರತ ಆರೋಗ್ಯಪೂರ್ಣ ಜೀವನಕ್ಕೆ ದಾರಿಮಾಡಿಕೊಡುತ್ತದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ಆರ್.ಎಲ್.ವಿಜ್ಞಾನ ಕಾಲೇಜು ಹಾಗೂ ಲಿಂಗರಾಜ ಕಾಲೇಜು ಸಂಯುಕ್ತಾಶ್ರಯದಲ್ಲಿ ಜರುಗಿದ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
2914 ರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರು ಮಹಾತ್ಮಾ ಗಾಂಧೀಜಿಯವರ ಜಯಂತಿ ದಿನದಂತೆ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ಇಂದು ಈ ಮಿಷನ್ ಚಿಕ್ಕ ಮಕ್ಕಳಲ್ಲಿ, ಯುವಜನಾಂಗದಲ್ಲಿ ಜಾಗೃತಿಯನ್ನುಂಟುಮಾಡಿದೆ. ಭಾರತ ಸ್ವಚ್ಛತೆಯೆಡೆಗೆ ಹೆಜ್ಜೆ ಇಡುತ್ತಿದೆ. ನಮ್ಮ ಪರಿಸರ ಸ್ವಚ್ಛ ಹಾಗೂ ನೈರ್ಮಲ್ಯಯುಕ್ತವಾಗಿದ್ದರೆ ನೂರಾರು ರೋಗರುಜಿನಗಳನ್ನು ನಿಯಂತ್ರಿಸಲು ಸಾಧ್ಯ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸುಂದರ ಹಾಗೂ ಸ್ವಚ್ಛವಾಗಿಡುವ ಸಂಕಲ್ಪವನ್ನು ಮಾಡಬೇಕು. ಇದೊಂದು ರೀತಿಯ ಸಾಮಾಜಿಕ ಆಂದೋಲನವಾಗಬೇಕು. ಮಕ್ಕಳಲ್ಲಿ ಈ ಪ್ರಜ್ಞೆಯನ್ನುಂಟುಮಾಡಿದರೆ ದೇಶ ಬದಲಾಗುವುದರಲ್ಲಿ ಸಂದೇಹವಿಲ್ಲ. ಮಹಾತ್ಮಾ ಗಾಂಧೀಜಿಯವರ ಸಂಕಲ್ಪವು ಇದೇ ಆಗಿತ್ತು. ಸ್ವಚ್ಛತೆಯನ್ನು ಅವರು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಅಷ್ಟೇ ಆದ್ಯತೆ ನೀಡಿದರು. ಇಂದು ವಿದೇಶಗಳು ಸ್ವಚ್ಛೆಗೆ ನೀಡಿರುವ ಮಹತ್ವ ಅಷ್ಟಿಷ್ಟಲ್ಲ. ಭಾರತವನ್ನು ಹಾಗೆಯೇ ರೂಪಿಸುವುದೂ ಕಷ್ಟವೇನಲ್ಲ. ಇಂದು ಸ್ವಚ್ಛ ಭಾರತ ಅಭಿಯಾನ ದೇಶದಲ್ಲಿ ಒಂದು ಸಂಚಲನವನ್ನೇ ಉಂಟುಮಾಡಿದೆ. ಇದು ಒಂದು ದಿನಕ್ಕೆ ಸೀಮತವಾಗಬಾರದು ಪ್ರತಿನಿತ್ಯ ಈ ಅಭಿಯಾನವಿರಬೇಕು. ನಮ್ಮ ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟಿರುತ್ತೇವೆಯೋ ಅಷ್ಟೇ ನಮ್ಮ ನಗರ, ಗ್ರಾಮಗಳನ್ನು ಸ್ವಚ್ಛವಾಗಿಡೋಣವೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಆರ್. ಎಲ್. ವಿಜ್ಞಾನ ಕಾಲೇಜಿನಿಂದ ಬೆಳಗಾವಿ ಪೊಲೀಸ್ ಕಮಿಷನರ್ ಕಚೇರಿ ಹಾಗೂ ಬೋಗರವೇಸ್ ಧರ್ಮವೀರ ಸಂಭಾಜಿ ವೃತ್ತದ ವರೆಗೆ ಸುಮಾರು ಮೂರಕ್ಕೂ ಹೆಚ್ಚು ವಿದ್ಯಾರ್ಥಿ ಹಾಗೂ ಶಿಕ್ಷಕರೊಂದಿಗೆ ಮಹಾಂತೇಶ ಕವಟಗಿಮಠ ಅವರು ಸ್ವಚ್ಛತೆಯ ಅಭಿಯಾನವನ್ನು ಕೈಗೊಳ್ಳುವ ಮೂಲಕ ಸ್ಫೂರ್ತಿಯನ್ನು ತುಂಬಿದರು.
ಕೆಎಲ್ಇ ಆಜೀವ ಸದಸ್ಯರಾದ ಡಾ.ಎಸ್.ಸತೀಶ, ಪ್ರೊ.ಶೀತಲ ನಂಜಪ್ಪನವರ, ಪದವಿ ಪ್ರಾಚಾರ್ಯೆ ಡಾ.ಜ್ಯೋತಿ ಕವಳೆಕರ, ಪಿಯು ಪ್ರಾಚಾರ್ಯ ಪ್ರೊ.ವಿಶ್ವನಾಥ ಕಾಮಗೋಳ, ಪ್ರಾಚಾರ್ಯೆ ಗಿರಿಜಾ ಹಿರೇಮಠ, ಎನ್ಸಿಸಿ ಅಧಿಕಾರಿಗಳಾದ ಕ್ಯಾಪ್ಟನ್ ಡಾ.ಮಹೇಶ ಗುರನಗೌಡರ, ಲೆಫ್ಟಿನಂಟ್ ಶಿವಾನಂದ ಬುಲಬುಲೆ, ಎನ್ಸಿಸಿ ಅಧಿಕಾರಿಗಳಾದ ಎಚ್.ಎಸ್.ಚನ್ನಪ್ಪಗೋಳ, ಬಿ.ಸಿ.ಬನ್ನೂರ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.