ಮಂಗಳೂರು :
“ನಮ್ಮ ಮಣ್ಣಿನಲ್ಲಿ ಹುಟ್ಟಿ ಕಣ್ಮರೆಯಾಗಿರುವ ಬ್ಯಾಂಕುಗಳು ಹಾಗೂ ಇತರೆ ಬ್ಯಾಂಕ್ ಗಳನ್ನು ಕರ್ಣಾಟಕ ಬ್ಯಾಂಕ್ ಜತೆ ವಿಲೀನ ಮಾಡಿಕೊಳ್ಳುವಂತಾಗಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಂಗಳೂರಿನಲ್ಲಿ ನಡೆದ ಕರ್ಣಾಟಕ ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
ಯಾರ ಪ್ರಮಾದವೋ ಏನೋ, ನಮ್ಮ ಮಣ್ಣಿನಲ್ಲಿ ಹುಟ್ಟಿದ ಸಿಂಡಿಕೇಟ್, ಕಾರ್ಪೋರೇಶನ್ ಬ್ಯಾಂಕ್ ಗಳು ಕಣ್ಮರೆಯಾಗಿವೆ. ನಿಮ್ಮ ಮುಂದಿನ ಗುರಿ ನಾವು ಕಳೆದುಕೊಂಡಿರುವ ನಮ್ಮ ಮಣ್ಣಿನ ಬ್ಯಾಂಕುಗಳನ್ನು ಮತ್ತೆ ಕರ್ಣಾಟಕ ಬ್ಯಾಂಕುಗಳ ಮೂಲಕ ಮತ್ತೆ ವಾಪಸ್ ಪಡೆದು, ನಮ್ಮ ಗೌರವ ಸ್ವಾಭಿಮಾನ ಮರಳಿ ಪಡೆಯುವುದು. ಈ ಬಗ್ಗೆ ಕರ್ಣಾಟಕ ಬ್ಯಾಂಕಿನ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪಣ ತೊಡಬೇಕು.
ಈ ಬ್ಯಾಂಕಿನ ಬಗ್ಗೆ ನನ್ನ ಸ್ನೇಹಿತರ ಬಗ್ಗೆ ಸಾಕಷ್ಟು ವಿಚಾರ ಕೇಳಿದ್ದೇನೆ. ಇದು ಕೇವಲ ಉದ್ಯಮಕ್ಕೆ ಮಾತ್ರ ನೆರವಾಗುವುದಿಲ್ಲ. ಗ್ರಾಮೀಣ ಭಾಗದ ಜನಸಾಮಾನ್ಯರಿಗೂ ಸೇವೆ ಸಲ್ಲಿಸುತ್ತಿದೆ.
ಈ ಸಮಾರಂಭಕ್ಕೆ ಬಂದು, ₹100 ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡುವ ಅವಕಾಶ ನನ್ನ ಭಾಗ್ಯ. ಈ ಸಮಾರಂಭಕ್ಕೆ ನನಗಿಂತ ಉನ್ನತ ಸ್ಥಾನದಲ್ಲಿರುವ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಆಗಮಿಸಬೇಕಿತ್ತು. ಆದರೂ ನನ್ನ ಕೈಯಲ್ಲಿ ಇವುಗಳ ಅನಾವರಣ ಮಾಡಿಸಿದ್ದು ನೋಡಿ ನನಗೆ ಪುರಂದರ ದಾಸರ ಪದ ನೆನಪಾಗುತ್ತಿದೆ. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ.
ಈ ಕಾರ್ಯಕ್ರಮಕ್ಕೆ ಬಹಳ ಸಂತೋಷದಿಂದ, ಉತ್ಸುಕತೆಯಿಂದ, ದೂರದೃಷ್ಟಿಯೊಂದಿಗೆ ಬಂದಿದ್ದೇನೆ. ನನಗೆ ದಕ್ಷಿಣ ಕನ್ನಡ ಭಾಗದ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಈ ಭಾಗ ಇತಿಹಾಸವನ್ನೇ ಹೊಂದಿದೆ.
ಈ ಬ್ಯಾಂಕಿನ ಇತಿಹಾಸ ನೋಡಿದಾಗ ನೀವು ಬೆಳೆದು ಬಂದ ದಾರಿ ಕಾಣಿಸಿತು. ನೀವು ನಿಮ್ಮ ಮೂಲ ಮರೆತರೆ ಮುಂದೆ ಯಶಸ್ಸು ಸಿಗುವುದಿಲ್ಲ. ನೀವು ನಿಮ್ಮ ಹಾದಿಯನ್ನು ಯಾವತ್ತೂ ಬದಲಿಸಿಲ್ಲ. ಶಿವರಾಂ ಕಾರಂತ ಅವರು ರಂಗೋಲಿಯನ್ನು ಈ ಬ್ಯಾಂಕಿನ ಚಿಹ್ನೆಯಾಗಿ ನೀಡಿದ್ದಾರೆ. ಅದಕ್ಕೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ.
*ದಕ್ಷಿಣ ಕನ್ನಡ ಭಾಗದ ಭವಿಷ್ಯ ಉಳಿಸಲು ಬದ್ಧ:*
ದಕ್ಷಿಣ ಕನ್ನಡ ಭಾಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಬ್ಯಾಂಕಿಂಗ್, ಸಂಸ್ಕೃತಿ, ಧರ್ಮ, ಶಿಕ್ಷಣ, ಉದ್ಯಮ, ಪರಿಸರ, ಸಂಪರ್ಕ ಕ್ಷೇತ್ರದಲ್ಲಿ ತನ್ನದೇ ಆದ ಇತಿಹಾಸವಿದೆ. ಆದರೆ ಇಂದು ಪರಿಸ್ಥಿತಿ ಗಂಭೀರವಾಗಿದೆ.
ಇಲ್ಲಿರುವ ಗುಣಮಟ್ಟದ ಶಾಲೆ, ಇಂಜಿನಿಯರ್ ಕಾಲೇಜು, ವೈದ್ಯಕೀಯ ಕಾಲೇಜು ಇರುವ ಸ್ಥಳ ಈ ಜಿಲ್ಲೆ. ಇಲ್ಲಿಂದ ಅತ್ಯುತ್ತಮ ಮಾನವ ಸಂಪನ್ಮೂಲ ನೀಡುತ್ತಿದೆ. ಸರ್ಕಾರ ಸಿಎಸ್ ಆರ್ ವ್ಯವಸ್ಥೆ ಆರಂಭಿಸುವ ಮುನ್ನ ಈ ವ್ಯವಸ್ಥೆಯನ್ನು ಈ ಭಾಗದಲ್ಲಿ ಪರಿಚಯಿಸಲಾಗಿತ್ತು.
ಕರ್ಣಾಟಕ ಬ್ಯಾಂಕ್ ಈ ಪ್ರದೇಶವನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಅಧ್ಯಯನ ಮಾಡಬೇಕು. ಇಲ್ಲಿನ ನಮ್ಮ ಸೋದರ ಸೋದರಿಯರು ಬಹಳ ವಿದ್ಯಾವಂತರಿದ್ದಾರೆ. ಅವರು ಉದ್ಯೋಗ ಹುಡುಕಿ ಹೊರ ರಾಜ್ಯ ಹಾಗೂ ವಿದೇಶಗಳಿಗೆ ಹೋಗುತ್ತಿದ್ದಾರೆ. ಇವರನ್ನು ರಾಜ್ಯದಲ್ಲೇ ಉಳಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ವರದಿ ನೀಡಿ.
ಈ ಪ್ರದೇಶದ ಭವಿಷ್ಯದ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ. ನನಗೆ ಈ ವಿಚಾರದಲ್ಲಿ ರಾಜಕೀಯ ಬೇಡ, ಕರ್ನಾಟಕ ರಾಜ್ಯ ರಚನೆಯಾಗುವ ಮುನ್ನವೇ ಕರ್ಣಾಟಕ ಬ್ಯಾಂಕ್ ಅಸ್ತಿತ್ವದಲ್ಲಿತ್ತು. ಇದೇ ಇತಿಹಾಸ.
ನಾನಿಲ್ಲಿ ನಿಮ್ಮ ಸನ್ಮಾನ ಸ್ವೀಕರಿಸಲು ಬಂದಿಲ್ಲ. ನಮ್ಮ ಸರ್ಕಾರ ಕರ್ಣಾಟಕ ಬ್ಯಾಂಕಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದೆ ಎಂದು ಹೇಳಲು ಬಯಸುತ್ತೇನೆ.
ನೀವು ಎಲ್ಲ ವರ್ಗದ ಜನರಿಗೂ ಸೇವೆ ಮಾಡುತ್ತಿದ್ದೀರಿ. ನಾನು ಬಾಲಗಂಗಾಧರನಾಥ ಸ್ವಾಮೀಜಿಗಳ ಕಾರ್ಯಕ್ರಮಕ್ಕೆ ಹೋಗಿದ್ದಾಗ ಸತ್ಯ ಸಾಯಿಬಾಬಾ ಅವರು ದುಡ್ಡು ಮತ್ತು ಬ್ಲಡ್ ಎರಡು ಚಲನೆಯಲ್ಲಿರಬೇಕು ಎಂದು ಹೇಳಿದ್ದರು. ಆಗ ಸಮಾಜ ಆರ್ಥಿಕವಾಗಿ ಬೆಳೆಯಲು ಸಾಧ್ಯ.
ಬ್ಯಾಂಕಿನ ಗ್ರಾಹಕರು ಬಲಿಷ್ಠವಾದರೆ ನೀವು ಬಲಿಷ್ಠರಾಗುತ್ತೀರಿ. ಹೀಗಾಗಿ ನೀವು ನಿಮ್ಮ ಲಾಭದ ಜತೆಗೆ ಗ್ರಾಹಕರ ಹಿತದ ಬಗ್ಗೆಯೂ ಆಲೋಚನೆ ಮಾಡಬೇಕು.
ಚಿಕ್ಕದಾಗಿ ಹುಟ್ಟಿಕೊಂಡ ಈ ಬ್ಯಾಂಕ್ 100 ವರ್ಷದಲ್ಲಿ ರಾಷ್ಟ್ರದ ಗಮನ ಸೆಳೆದು ರಾಜ್ಯದ ಘನತೆ ರಕ್ಷಣೆ ಮಾಡುವ ಮಟ್ಟಕ್ಕೆ ಬೆಳೆದಿದೆ.
ನಾನು ಕರ್ಣಾಟಕ ಬ್ಯಾಂಕ್ ನಲ್ಲಿ ಖಾತೆ ಹೊಂದಿಲ್ಲ, ಸದಸ್ಯತ್ವ ಹೊಂದಿಲ್ಲ. ಈಗ ಈ ಬ್ಯಾಂಕ್ ನಲ್ಲಿ ಖಾತೆ ತೆರೆದು ಈ ಕುಟುಂಬದ ಭಾಗವಾಗುತ್ತೇನೆ.