ಬೆಳಗಾವಿ :
ಭಾರತ ಇಲ್ಲಿಯವರೆಗೆ ಯಾವ ದೇಶದ ಮೇಲೆಯೂ ದಾಳಿ ಮಾಡಿಲ್ಲ. ಆದರೆ ತನ್ನ ಮೇಲೆ ದಾಳಿ ಮಾಡಿದ ವೈರಿಗಳನ್ನು ತಿರುಗಿ ನೋಡುವಂತೆ ಪಾಠ ಕಲಿಸಿದೆ ಎಂದು ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಎಚ್.ಎಂ.ಚೆನ್ನಪ್ಪಗೋಳ ಹೇಳಿದರು.
ಲಿಂಗರಾಜ ಕಾಲೇಜಿನಲ್ಲಿ ಎನ್ಸಿಸಿ ಹಾಗೂ ಎನ್ಎಸ್ಎಸ್ ಘಟಕದಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ್ದ 24 ನೇ ವರ್ಷಾಚರಣೆ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ನಾವು ಇಲ್ಲಿಯವರೆಗೆ ನಮ್ಮ ಮೇಲೆ ದಾಳಿ ಮಾಡಿದವರ ಇತಿಹಾಸವನ್ನು ಓದುತ್ತಾ ಬಂದಿದ್ದೇವೆ. ಹಾಗಲ್ಲ, ನಮ್ಮ ದೇಶದ ವೀರರು ತಮ್ಮ ಪ್ರಾಣದ ಹಂಗು ತೊರೆದು ಭಾರತ ಮಾತೆಯನ್ನು ಸಂರಕ್ಷಿಸಿದ ಪಾಠವನ್ನು ಓದುವ ಕಾಲವಿದು. ಪಾಕಿಸ್ತಾನದ ಸೈನ್ಯಕ್ಕೆ ತಕ್ಕ ಪಾಠವನ್ನು ಕಲಿಸಿ ವಿಜಯ ಪತಾಕೆಯನ್ನು ಹಾರಿಸಿದ ಶ್ರಮದ ದಿನವಿಂದು ಹೇಳಿದರು. ನಮ್ಮಲ್ಲಿ ದೇಶ ಪ್ರೇಮವನ್ನು ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕಾದ ಸಂದರ್ಭವಿದು. ಅನೇಕ ವೀರರು ಈ ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿ ಸಂರಕ್ಷಿಸಿದ್ದಾರೆ. ಅಂತಹ ಭಾರತೀಯ ಯೋಧರಿಗೆ ನಾವು ನಮನಗಳನ್ನು ಸಲ್ಲಿಸಲೇಬೇಕೆಂದು ಹೇಳಿದರು.
ಪದವಿಪೂರ್ವ ಪ್ರಾಚಾರ್ಯೆ ಪ್ರೊ.ಗಿರಿಜಾ ಹಿರೇಮಠ ಅವರು ಮಾತನಾಡಿ, ಕಾರ್ಗಿಲ್ ವಿಜಯ ನಮ್ಮ ಯೋಧರ ಪರಾಕ್ರಮಕ್ಕೆ ಸಾಕ್ಷಿಯಾಗಿ ನಿಂತಿದೆ. ಪಾಕಿಸ್ತಾನದ ಸೈನಿಕರು ಎತ್ತರವಾದ ಪ್ರದೇಶಗಳಲ್ಲಿ ಅಡಗಿ ವಶಪಡಿಸಿಕೊಂಡಿದ್ದ ನಮ್ಮ ಭೂಮಿಯನ್ನು ಅಹೋರಾತ್ರಿ ಹೋರಾಡಿ ಜಯದ ಧ್ವಜವನ್ನು ಹಾರಿಸಿದ ಯೋಧರ ಪರಾಕ್ರಮಕ್ಕೆ ಬಣ್ಣಿಸಲು ಪದಗಳಿಲ್ಲ. ಅವರ ತ್ಯಾಗ, ಸೇವೆ ಅಮರವೆಂದು ಹೇಳಿದರು.
ಎನ್ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ ಮಾತನಾಡಿ, ಭಾರತೀಯರ ಧಮನಿಧಮನಿಗಳಲ್ಲಿ ದೇಶಾಭಿಮಾನ ಅಖಂಡವಾಗಿ ಮೂಡಿನಿಂತಿದೆ. ಅದಕ್ಕೆ ಪಾಕಿಸ್ತಾನದೊಂದಿಗೆ ಮಾಡಿದ ಯುದ್ಧಗಳೇ ಸಾಕ್ಷಿ. ಪ್ರತಿಸಲ ಸೋತರು ವೈರಿ ರಾಷ್ಟ್ರಕ್ಕೆ ಬುದ್ಧಿಬಂದಿಲ್ಲ. ಇಂದು ಭಾರತ ಜಗತ್ತಿನ ಪ್ರಬಲವಾದ ಸೈನಿಕಶಕ್ತಿಯನ್ನು ಹೊಂದಿದೆ. ಆರ್ಥಿಕವಾಗಿ ಸಬಲಗೊಳ್ಳುತ್ತಿದೆ. ಇಂದಿನ ಯುವಜನಾಂಗ ದೈಹಿಕವಾಗಿ ಹಾಗೂ ಬೌದ್ಧಿಕವಾಗಿ ಸದೃಢವಾಗಿ ಬೆಳೆಯುವ ಮೂಲಕ ದೇಶಕ್ಕೆ ಮೌಲಿಕ ಕೊಡುಗೆಯನ್ನು ನೀಡಬೇಕೆಂದು ಹೇಳಿದರು.
ಎನ್ಸಿಸಿ ಕೆಡಟ್ ಅಖಿಲಾ ಗಜಾನನ ರಾಮನಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭೂಮಿ ರಾಮಚಂದ್ರ ಪಾಟೀಲ ವಂದಿಸಿದರು. ಕುಮಾರಿ ಪ್ರತಿಕ್ಷಾ, ಸಾರಿಕಾ ಪಾಟೀಲ ಪ್ರಾರ್ಥಿಸಿದರು. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.