ಬೆಳಗಾವಿ : ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ,- ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ರದ್ದು ಮಾಡುವಂತೆ ಕೋರಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ಜಿಲ್ಲಾ ಕರವೇ ಅಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಮಾಡಿದರು.
ಬೆಳಗಾವಿ ಜಿಲ್ಲೆ ಭೌಗೋಳಿಕವಾಗಿ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದೆ.ಹದಿನೈದು ತಾಲ್ಲೂಕು ಹದಿನೆಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ವಿಶಾಲ ಜಿಲ್ಲೆಯಾಗಿದೆ. ಬೆಳಗಾವಿ ಮಹಾನಗರಕ್ಕೆ ಮತ್ತು ಹಲವಾರು ತಾಲ್ಲೂಕುಗಳ ನೂರಾರು ಗ್ರಾಮಗಳಿಗೆ ಹಿಡಕಲ್ ಜಲಾಶಯದಿಂದಲೇ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಜಲಾಶಯ ಬೆಳಗಾವಿ ಮಹಾನಗರಕ್ಕೆ ನೀರು ಪೂರೈಸುವ ಮುಖ್ಯ ಜಲದ ಮೂಲವಾಗಿದೆ. ಪ್ರತಿ ವರ್ಷ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಹಿಡಕಲ್ ಜಲಾಶಯ ಖಾಲಿಯಾಗಿ ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಅಭಾವದಿಂದಾಗಿ ಜಿಲ್ಲೆಯ ಜನ ಹಾಗೂ ಬೆಳಗಾವಿ ಮಹಾನಗರದ ಜನತೆ ನೀರಿನ ಸಮಸ್ಯೆ ಎದುರಿಸುತ್ತಾರೆ ಎಂದು ವಿವರಿಸಿದರು.
ಹಿಡಕಲ್ ಜಲಾಶಯದಿಂದ ಬೇಸಿಗೆಯಲ್ಲಿ ಎಡದಂಡೆ ಮತ್ತು ಬಲದಂಡೆ ಎರಡೂ ಕಾಲುವೆಗಳಿಂದ ಕೃಷಿ ಜಮೀನುಗಳಿಗೆ ನೀರು ಹರಿಸಲಾಗುತ್ತಿದ್ದು ಹಿಡಕಲ್ ಜಲಾಶಯ ಬೆಳಗಾವಿ ಜಿಲ್ಲೆಯ ಜೀವನಾಡಿಯಾಗಿದೆ. ಬೆಳಗಾವಿಯ ನವೀಲು ತೀರ್ಥ ಜಲಾಶಯದಿಂದ ಈಗಾಗಲೇ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಿಗೆ ನೀರು ಪೂರೈಸಲಾಗುತ್ತಿದೆ. ಇದಕ್ಕೆ ಬೆಳಗಾವಿ ಜಿಲ್ಲೆಯ ಜನ ಎಂದಿಗೂ ವಿರೋಧ ಮಾಡಿಲ್ಲ .
ಮುಂದೆಯೂ ವಿರೋಧ ಮಾಡುವುದಿಲ್ಲ. ಆದರೆ ಸರ್ಕಾರ ಈಗ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಮಂಡಳಿಯಿಂದ ಹಿಡಕಲ್ ಜಲಾಶಯದಿಂದ ಯಬ್ಬಳ್ಳಿ- ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 0.5 ಟಿಎಂಸಿ ನೀರು ಪೂರೈಸುವ ಕಾಮಗಾರಿ ಆರಂಭಿಸಿದ್ದು ಸರ್ಕಾರ ಕೂಡಲೇ ಈ ಯೋಜನೆಯನ್ನು ರದ್ದು ಮಾಡಿ ಕಾಮಗಾರಿಯನ್ನು ನಿಲ್ಲಿಸಬೇಕು ಈ ವಿಚಾರ ಬೆಳಗಾವಿ ಜಿಲ್ಲೆಯ ಮಹತ್ವದ ವಿಚಾರವಾಗಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಈ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಬೆಳಗಾವಿ ಜಿಲ್ಲೆಯ ಎಲ್ಲ ಸಂಘಟನೆಗಳು ಮತ್ತು ರೈತರು ಸೇರಿಕೊಂಡು ಕಾಮಗಾರಿಯನ್ನು ತಡೆಯ ಬೇಕಾಗುತ್ತದೆ. ಸರ್ಕಾರದ ವಿರುದ್ಧ ಬೆಳಗಾವಿ ಜಿಲ್ಲೆಯ ಬಂಡಾಯ ಎದುರಿಸಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.