ಬೆಂಗಳೂರು : ಬಹುನಿರೀಕ್ಷಿತ ‘ಕಾಂತಾರ- ಅಧ್ಯಾಯ 1’ ಟ್ರೇಲರ್ ಬಿಡುಗಡೆಯಾಗಿದೆ. ಹೊಂಬಾಳೆ ಫಿಲ್ಸ್ ಅಧಿಕೃತ ಯುಟ್ಯೂಬ್ ಚಾನೆಲ್ನಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
ಅದ್ಧೂರಿ ಸೆಟ್ ಹಾಗೂ ಬಿಜಿಎಮ್ಗಳನ್ನು ಟ್ರೇಲರ್ನಲ್ಲಿ ಕಾಣಬಹುದು.
ಹೊಂಬಾಳೆ ಫಿಲ್ಡ್ ನಿರ್ಮಾಣದ ಚಿತ್ರ ಅ.2ರಂದು ತೆರೆ ಕಾಣಲಿದೆ. ‘ಬನವಾಸಿಯ ಕದಂಬರೊಂದಿಗೆ ತುಳುನಾಡಿನ ದೈವದ ಕಥೆ ಪ್ರಾರಂಭವಾಗುತ್ತದೆ. ನಾಗಾ ಸಾಧುವಾಗಿ, ಯೋಧನಾಗಿ ಮನುಷ್ಯ ಮತ್ತು ದೈವದ ನಡುವೆ ಸಂಪರ್ಕ ಬೆಸೆಯುವ ಪಾತ್ರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ’ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಕ್ರಿ.ಶ 4ನೇ ಶತಮಾನದ ಸಂಸ್ಕೃತಿ ಮತ್ತು ವೈಭವವನ್ನು ತೆರೆ ಮೇಲೆ ತರಲು ಚಿತ್ರತಂಡ ಸಜ್ಜಾಗಿದ್ದು, ಅಕ್ಟೋಬರ್ 2ರಂದು ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ ಕನ್ನಡ ಸೇರಿ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ‘ಕಾಂತಾರ’, ರಿಷಬ್ ಶೆಟ್ಟಿ ಅವರಿಗೆ ಗಡಿ ಮೀರಿದ ಜನಪ್ರಿಯತೆ ಜೊತೆಗೆ, ಅತ್ಯುತ್ತಮ ನಟ ವಿಭಾಗದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿತ್ತು. ಈ ಚಿತ್ರದ ಪ್ರೀಕ್ವೆಲ್ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.
ಅಜನೀಶ್ ಲೋಕನಾಥ್ ಸಂಗೀತ ಸಿನಿಮಾಕ್ಕಿದೆ. ಹೋರಾಟದ ಹಾದಿಯಲ್ಲಿ ನವಿರಾದ ಪ್ರೇಮಕಥೆಯನ್ನೂ ಹೆಣೆದಿರುವುದನ್ನು ಟ್ರೇಲರ್ನಲ್ಲಿ ಕಾಣಬಹುದು. ರುಕ್ಕಿಣಿ ವಸಂತ್, ರಿಷಬ್ ಶೆಟ್ಟಿಗೆ ಜತೆಯಾಗಿದ್ದಾರೆ.
ಕಾಂತಾರ ಚಾಪ್ಟರ್ 1′ ಟ್ರೇಲರ್ ರಿಲೀಸ್.
ಅದ್ಭುತ ಸಿನಿಮೀಯ ಅನುಭವ ಪಡೆಯಲು ಸಜ್ಜಾಗಿದೆ ‘ಕಾಂತಾರ ಚಾಪ್ಟರ್ 1’ ಚಿತ್ರತಂಡ. ಚಿತ್ರದ ಒಂದು ನೋಟವನ್ನು ಟ್ರೇಲರ್ ಮೂಲಕ ಪ್ರೇಕ್ಷಕರಿಗೆ ಒದಗಿಸಿದ್ದು, ಸಿನಿಮಾ ನೋಡುವ ಕಾತರವನ್ನು ಹೆಚ್ಚಿಸಿದೆ.
‘ಕಾಂತಾರ ಚಾಪ್ಟರ್ 1’ ಟ್ರೇಲರ್ ಬಿಡುಗಡೆಯ
ಕಾಯುವಿಕೆ ಕೊನೆಗೊಂಡಿದೆ. ಬಹುದಿನಗಳಿಂದ ಅದೆಷ್ಟೋ ಮಂದಿ ಕಾತರರಾಗಿದ್ದ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಅದ್ಭುತ ಸಿನಿಮೀಯ ಅನುಭವ ಒದಗಿಸುವ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ ಸಿನಿಮಾದ ಒಂದು ಆಕರ್ಷಕ ನೋಟವನ್ನು ಈ ಟ್ರೇಲರ್ ಒದಗಿಸಿದೆ. ಕಂಟೆಂಟ್ ಮತ್ತು ದೃಶ್ಯವೈಭವವೇ ಟ್ರೇಲರ್ನ ಹೈಲೆಟ್ ಆಗಿದೆ.
2022ರ ಸೆಪ್ಟಂಬರ್ 30. ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನಲೆ ಎದ್ದ ದಿನ. ನಿರೀಕ್ಷೆಗೂ ಮೀರಿ ಸಿನಿಮಾವೊಂದು ಅಭೂತಪೂರ್ವ ಯಶಸ್ಸು ಕಂಡ ದಿನ. ಎಲ್ಲರ ಬಾಯಲ್ಲೂ ಕಾಂತಾರ, ಕಾಂತಾರ, ಕಾಂತಾರ. ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ಮತ್ತಷ್ಟು ಉನ್ನತ ಸ್ಥಾನಕ್ಕೇರಿಸಿದ ಸಂದರ್ಭ. ಕನ್ನಡದಲ್ಲಿ ಜನಪ್ರಿಯರಾಗಿದ್ದ ರಿಷಬ್ ಶೆಟ್ಟಿ, ಈ ಚಿತ್ರದ ಮೂಲಕ ಭಾರತದಾದ್ಯಂತ ಡಿವೈನ್ ಸ್ಟಾರ್ ಎಂದೇ ಖ್ಯಾತರಾದರು. ಹೊಂಬಾಳೆ ಫಿಲ್ಮ್ಸ್ ಕೂಡಾ ಗಡಿ ಮೀರಿ ಬಹುಭಾಷೆಗಳಲ್ಲಿ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಲು ಪ್ರಾರಂಭಿಸಿತು. ಮೊದಲ ಭಾಗದ ಭರ್ಜರಿ ಯಶಸ್ಸಿನ ಬಳಿಕ ಘೋಷಣೆಯಾಗಿದ್ದೇ, ಈ ‘ಕಾಂತಾರ ಚಾಪ್ಟರ್ 1’.
ಅಂತಿಮವಾಗಿ, ಸೋಮವಾರ ಚಿತ್ರ ತನ್ನ ಟ್ರೇಲರ್ ಅನಾವರಣಗೊಳಿಸಿದೆ. ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವ ಸೂಚನೆಯನ್ನು ಈ ಟ್ರೇಲರ್ ಬಿಟ್ಟುಕೊಟ್ಟಿದೆ. ಚಿತ್ರ ಅಕ್ಟೋಬರ್ 2, ಮುಂದಿನ ಗುರುವಾರ ಬಹುಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಈ ಬಹುನಿರೀಕ್ಷಿತ ಚಿತ್ರಕ್ಕೆ 3 ವರ್ಷಗಳ ಕಾಲ ಕಠಿಣ ಶ್ರಮ ಹಾಕಲಾಗಿದೆ. 250 ದಿನಗಳ ಕಾಲ ಶೂಟಿಂಗ್ ನಡೆದಿದೆ. ಹಲವು ಏರಿಳಿತಗಳ ನಡುವೆ ದೈವದ ಆಶೀರ್ವಾದದಿಂದ ಚಿತ್ರ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ.
ದಕ್ಷಿಣ ಚಿತ್ರರಂಗದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಕನ್ನಡದ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅಡಿ ಈ ಬಿಗ್ ಬಜೆಟ್ ಸಿನಿಮಾ ನಿರ್ಮಾಣಗೊಂಡಿದೆ. ಮೊದಲ ಭಾಗ ಸರಿಸುಮಾರು 15 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣಗೊಂಡಿತ್ತು. ಆದ್ರೆ ಈ ಚಿತ್ರ ದೊಡ್ಡ ಬಜೆಟ್ನಲ್ಲಿ ನಿರ್ಮಾಣಗೊಂಡಿದೆ. ರಿಷಬ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದರೆ, ‘ಕನಕವತಿ’ಯಾಗಿ ರುಕ್ಮಿಣಿ ವಸಂತ್ ಮತ್ತು ‘ಕುಲಶೇಖರ’ನಾಗಿ ಕರ್ನಾಟಕ ಮೂಲದ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಅಭಿನಯಿಸಿದ್ದಾರೆ. ಅರವಿಂದ್ ಕಶ್ಯಪ್ ಅವರ ಕ್ಯಾಮರಾ ಕೈಚಳಕ, ಸುರೇಶ್ ಅವರ ಎಡಿಟಿಂಗ್ ಈ ಸಿನಿಮಾಗಿದೆ. ಬಿ.ಅಜನೀಶ್ ಲೋಕನಾಥ್ ಸಂಗೀತ ಒದಗಿಸಿದ್ದಾರೆ. ಅಜನೀಶ್ ಮತ್ತು ಕಶ್ಯಪ್ ಇಬ್ಬರೂ ಸಹ ಮೂಲ ಚಿತ್ರದ ಭಾಗವಾಗಿದ್ದರು. ಉಳಿದಂತೆ, ಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಕೂಡಾ ತಂಡದ ಭಾಗವಾಗಿದ್ದಾರೆ.