ಕನ್ನಡ ಭವನದಲ್ಲಿ ಸಿರಿ ಪುರಂದರ ನಾಟಕ ಪ್ರದರ್ಶನ
ಬೆಳಗಾವಿ :
ಕನ್ನಡ ರಂಗಭೂಮಿಗೆ ಭವ್ಯವಾದ ಇತಿಹಾಸವಿದೆ. ಅದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೆ ಜೀವನ ವಿವಿಧ ಆಯಾಮಗಳನ್ನು ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಬೆಳಗಾವಿ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ನುಡಿದರು. ಅವರು ಬೆಳಗಾವಿಯ ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘವು ನೆಹರು ನಗರದಲ್ಲಿರುವ ಕನ್ನಡ ಸಾಂಸ್ಕೃತಿಕ ಭವನದಲ್ಲಿ ಪ್ರಪ್ರಥಮವಾಗಿ ಪ್ರದರ್ಶನಗೊಂಡ ‘ಸಿರಿ ಪುರಂದರ’ ಕನ್ನಡ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು.
ಇಂದು ಜನಮಾನಸದಿಂದ ದೂರಸರಿಯುತ್ತಿರುವ ರಂಗಭೂಮಿಯನ್ನು ಮತ್ತೊಮ್ಮೆ ಜೀವಂತಗೊಳಿಸುವ ಕಾರ್ಯನಡೆಯಬೇಕಾಗಿದೆ. ಒಂದು ಕಾಲದಲ್ಲಿ ರಂಗಭೂಮಿ ಕಲಾವಿದರು ಊರೂರು ಸುತ್ತಾಡಿ ಅದ್ಭುತವಾದ ನಾಟಕವನ್ನು ನೀಡುತ್ತಿದ್ದರು. ಇಂದು ಕಲಾವಿದರು ಸಹೃದಯರು ಒಂದೇ ಸೂರಿನಡಿ ಇದನ್ನು ಸವಿಯಲು ಸುಸಜ್ಜಿತವಾದ ರಂಗಮAದಿರಗಳು ಸಿದ್ಧವಿದ್ದರೂ ಅದನ್ನು ಸವಿಯುವ ಹೃದಯವಂತರ ಕೊರತೆ ಎದ್ದು ಕಾಣುತ್ತಿದೆ. ಕನ್ನಡ ರಂಗಭೂಮಿಯನ್ನು ಜೀವಂತ ಇಡುವುದು ಎಲ್ಲರ ಕರ್ತವ್ಯವಾಗಿದೆ. ಕನ್ನಡ ಸಾಂಸ್ಕೃತಿಕ ಭವನದ ರೂವಾರಿಗಳಾದ ಡಾ.ಪ್ರಭಾಕರ ಕೋರೆಯವರು ಅತ್ಯಂತ ಕಾಳಜಿಯಿಂದ ರಂಗಮAದಿರವನ್ನು ರೂಪಿಸಿದ್ದಾರೆ. ಇಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಲ್ಲರೂ ಪ್ರೋತ್ಸಾಹವನ್ನು ನೀಡಬೇಕೆಂದು ಕರೆನೀಡಿದರು.
ಸಿರಿ ಪುರಂದರ ಈ ನಾಟಕವನ್ನು ಕಲಬುರಗಿಯ ರಂಗಾಯಣ ತಂಡದವರು ಪ್ರಸ್ತುತ ಪಡಿಸಿದರು. ಶ್ರೀರಂಗರ ರಚನೆಯ ಈ ನಾಟಕದ ನಿರ್ದೇಶನ ಮಹಾದೇವ ಹಡಪದ ಹಾಗೂ ಸಂಗೀತ ರಾಮಚಂದ್ರ ಹಡಪದ ಅವರದಾಗಿತ್ತು.
ಸಾಹಿತಿಗಳಾದ ಡಾ.ಬಸವರಾಜ ಜಗಜಂಪಿ, ಬಿ.ಎಸ್.ಗವಿಮಠ, ಏಣಗಿ ಸುಭಾಷ, ಯ.ರು.ಪಾಟೀಲ, ಶಿವನಗೌಡ ಪಾಟೀಲ, ಸುಧೀರ ಕುಲಕರ್ಣಿ, ಡಾ.ಮಹೇಶ ಗುರನಗೌಡರ ಮೊದಲಾದವರು ಉಪಸ್ಥಿತರಿದ್ದರು.