ಕನ್ನಡಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿರುವ ಡಾ. ಕುಮಾರ ತಳವಾರ ದುಡಿದ ಹಣದಲ್ಲಿ ಶೇ. 10 ರಷ್ಟು ಕನ್ನಡ ಸೇವೆಗೆ ಮೀಸಲು! ಯಾವ ಪ್ರಶಸ್ತಿ, ಸನ್ಮಾನ, ಹಾರ-ತುರಾಯಿ, ಪ್ರಚಾರ-ಪ್ರಶಂಸೆಗಳ ಗೋಜಿಲ್ಲದೆ ತಮ್ಮಷ್ಟಕ್ಕೆ ತಾವು ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡವರು ಅನೇಕರು. ಅಂತವರ ಸಾಲಿಗೆ ಕನ್ನಡ ಸಂಘಟಕ, ಪತ್ರಕರ್ತ, ಪ್ರಾಧ್ಯಾಪಕ, ಕವಿಯಾಗಿ ಗುರುತಿಸಿಕೊಂಡಿರುವ ಡಾ. ಕುಮಾರ ಎಂ. ತಳವಾರ ಅವರೂ ಸೇರುತ್ತಾರೆ.
‘ಕನ್ನಡವನ್ನುಳಿದೆನಗೆ ಅನ್ಯಜೀವನವಿಲ್ಲ’ ಎಂಬ ಮಾತಿನಂತೆಯೇ ಬದುಕುವ ಇವರು ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೋಲಾಪುರದವರು. ಪ್ರಸ್ತುತ ಅಥಣಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಎಂ.ಎ, ನೆಟ್, ಬಿ.ಎಡ್, ಪಿಎಚ್.ಡಿ ಇವರ ಓದು. ವಿದ್ಯಾರ್ಥಿದೆಸೆಯಿಂದಲೇ ಅಪಾರವಾದ ಕನ್ನಡಪ್ರೀತಿ ಬೆಳೆಸಿಕೊಂಡು ಗಡಿಕನ್ನಡದ ಕಂಪು ಕಮರದಂತೆ ನೋಡಿಕೊಳ್ಳುವಲ್ಲಿ ತಮ್ಮದೇ ಆದ ಪಾತ್ರ ವಹಿಸಿದ್ದಾರೆ.
ಎಲ್ಲೇ ಹೋದರೂ ಕನ್ನಡವಿಲ್ಲದಿದ್ದರೆ ಅಲ್ಲಿ ಪ್ರಶ್ನಿಸಿ ಕನ್ನಡತನ ಮೆರೆಯುವ ಇವರು ಯಾವುದೇ ಶುಭ ಸಮಾರಂಭಗಳಿದ್ದರೂ ಕನ್ನಡ ಪುಸ್ತಕ, ಶಲ್ಲೇ, ಕನ್ನಡಾಂಬೆಯ ಭಾವಚಿತ್ರವನ್ನೇ ಉಡುಗೊರೆಯಾಗಿ ನೀಡುತ್ತಾರೆ. ತಮ್ಮ ಅಧ್ಯಾಪನ ವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡದ ದೀಕ್ಷೆ ನೀಡಿದ್ದಾರೆ.
ವಿದ್ಯಾರ್ಥಿಯಾಗಿದ್ದಾಗ ತಮಗೆ ಮನೆಯಲ್ಲಿ ಖರ್ಚಿಗೆ ಕೊಡುತ್ತಿದ್ದ ಹಣ, ವಿದ್ಯಾರ್ಥಿ ವೇತನ, ಲೇವಾದೇವಿದಾರರ ಬಳಿ ಸಾಲ ಮಾಡಿ ನೂರಾರು ಕಾರ್ಯಕ್ರಮಗಳ ಆಯೋಜನೆಯ ಮೂಲಕ ಗಡಿಭಾಗದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಶ್ರೇಯಸ್ಸು ಇವರದು. ತಮ್ಮ ಹಸ್ತಾಕ್ಷರದಿಂದ ಹಿಡಿದು ಎಟಿಎಂ ಬಳಕೆಯವರೆಗೆ ಪ್ರತಿಯೊಂದರಲ್ಲೂ ಕನ್ನಡತನ ಕಾಣುತ್ತದೆ. ಇವರು ಕನ್ನಡವನ್ನೇ ಉಸುರುವ, ಉಸಿರಾಡುವ ಅಪರೂಪದ ಗಡಿಕನ್ನಡಿಗ, ವಿಶ್ವವನ್ನೇ ಕನ್ನಡಮಯವನ್ನಾಗಿಸುವ ಕನಸಿನ ವಿಶ್ವಕನ್ನಡಿಗರಾಗಿದ್ದಾರೆ.
ದುಡಿಯುವ ಹಣದಲ್ಲಿ ಶೇ. 10 ರಷ್ಟು ಕನ್ನಡದ ಸೇವೆಗೆ ಮೀಸಲು!
ಅಥಣಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ದುಡಿದ ಹಣದಲ್ಲಿ ಶೇ. 10 ರಷ್ಟನ್ನು ಕನ್ನಡ ಸೇವೆಗೆಂದೇ ಮೀಸಲಿಡುವುದು ಇವರ ವಿಶೇಷ. ವಿದ್ಯಾರ್ಥಿಯಾಗಿದ್ದಾಗ ಕನ್ನಡಕ್ಕಾಗಿಯೇ ಮಾಡಿದ್ದ 70 ಸಾವಿರ ರೂ. ಸಾಲ ತೀರಿಸಲು ಅನಿವಾರ್ಯವಾಗಿ ಪ್ರಾಧ್ಯಾಪಕ ವೃತ್ತಿಗೆ ಬರಬೇಕಾಗಿ ಬಂತು; ಅದೇ ಮುಂದೆ ಖಾಯಂ ಆಯ್ತು ಎನ್ನುತ್ತಾರೆ ಕುಮಾರ.
ಸಂಘಟನೆಗಳ ಸ್ಥಾಪನೆ :
ಬಿ.ಎ ವಿದ್ಯಾರ್ಥಿಯಾಗಿದ್ದಾಗ ಹುಟ್ಟುಹಾಕಿದ್ದ ವಿಶ್ವಕನ್ನಡ ರಕ್ಷಕ ದಳ ಮತ್ತು ನಿಪ್ಪಾಣಿಯಲ್ಲಿ ಗಡಿನಾಡು ಕನ್ನಡ ಬಳಗ ಎಂಬ ಎರಡು ಸಂಘಟನೆಗಳ ಮೂಲಕ ಗಡಿಭಾಗದ ಹಳ್ಳಿಗಳಲ್ಲಿಯೂ ಕನ್ನಡದ ಕಂಪು ಪಸರಿಸುವ ಕಾರ್ಯ ಮಾಡುತ್ತಿದ್ದಾರೆ.
ಕನ್ನಡ ಶಾಲೆಗಳ ಬಗೆಗಿನ ಒಲವು :
ಗಡಿಭಾಗದ ಶಾಲೆಗಳಿಗೆ ಭೇಟಿ ನೀಡಿ, ಮೂಲಭೂತ ಸಮಸ್ಯೆಗಳ ಕುರಿತು ನಿರಂತರವಾಗಿ ತಮ್ಮ ಪತ್ರಿಕೆಯಲ್ಲಿ ಬರೆಯುತ್ತ, ಕನ್ನಡ ಶಾಲೆಗಳಿಗೆ ಯಾವುದೇ ತೊಂದರೆಯಾದರೂ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸುತ್ತಾರೆ.
ಕನ್ನಡಮಯ ಮದುವೆ :
ತಮ್ಮ ಮದುವೆಯಲ್ಲಿ ಸಂಪೂರ್ಣವಾಗಿ ಹಳದಿ-ಕೆಂಪು ಬಾವುಟದೊಂದಿಗೆ ಸಿಂಗರಿಸಿ, ಪುಸ್ತಕ ಬಿಡುಗಡೆ, ದಾಂಪತ್ಯ ಕವಿಗೋಷ್ಠಿ, ಕನ್ನಡಪರ ಚಿಂತನ-ಮಂಥನ ಗೋಷ್ಠಿಗಳನ್ನು ಏರ್ಪಡಿಸಿ ಕನ್ನಡ ಹಬ್ಬದ ರೀತಿಯಲ್ಲಿ ಮದುವೆಯಾಗಿ ನಾಡಿನ ಗಮನ ಸೆಳೆದಿದ್ದರು. ಈ ಮದುವೆಯು ನಂತರದಲ್ಲಿ ಅನೇಕರಿಗೆ ಪ್ರೇರಣೆಯಾಯಿತು.
ಡಾ. ರಾಜಕುಮಾರ ವೃತ್ತ :
ತಮ್ಮ ಹುಟ್ಟೂರಾದ ಸೋಲಾಪುರದಲ್ಲಿ ವೃತ್ತವೊಂದಕ್ಕೆ ಕರ್ನಾಟಕ ರತ್ನ ಡಾ. ರಾಜಕುಮಾರ ಎಂದು ನಾಮಕರಣ ಮಾಡಿದ್ದು, ಬೆಳಗಾವಿ ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ.
ಜೈ ಕನ್ನಡ!
ನೀವು ಇವರಿಗೆ ಕರೆ ಮಾಡಿದರೆ ಆ ಕಡೆಯಿಂದ ಹೆಲೋ ಬದಲಾಗಿ ‘ಜೈ ಕನ್ನಡ ಹೇಳ್ರಿ…’ ಎಂಬ ಧ್ವನಿ ಕೇಳಿಸುತ್ತದೆ.
ಕನ್ನಡಪರ ಅಭಿಲಾಷೆ :
ಇಂದಿನ ಯುವಪೀಳಿಗೆ ಬಲಪಂಥೀಯ ಹಾಗೂ ಎಡಪಂಥೀಯ ವಿಚಾರಗಳಿಂದ ಹೊರಬಂದು ಕನ್ನಡಪಂಥೀಯ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ನಿತ್ಯವೂ ಪರಭಾಷಿಕರ ಹಾಗೂ ಉತ್ತರ ಭಾರತೀಯರ ಉಪಟಳ ಹೆಚ್ಚಾಗುತ್ತಿದ್ದು, ಸರಕಾರ ಸೂಕ್ತ ವಲಸೆ ನೀತಿ ಜಾರಿ ಮಾಡಿ ಕಡಿವಾಣ ಹಾಕಬೇಕಿದೆ ಎನ್ನುತ್ತಾರೆ ಕುಮಾರ.
ಇಂತಹ ಕನ್ನಡದ ಕಟ್ಟಾಳುಗಳನ್ನು ಗುರುತಿಸುವ ಕೆಲಸ ಜಿಲ್ಲಾಡಳಿತ, ಕಸಾಪ ಆದಿಯಾಗಿ ಎಲ್ಲರಿಂದಲೂ ಆಗಬೇಕಾಗಿದೆ.

 
             
         
         
        
 
  
        
 
    