ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸಚಿವ ಶಿವರಾಜ್ ತಂಗಡಗಿ ಕನ್ನಡದಲ್ಲಿ ‘ಶುಭವಾಗಲಿ’ ಎಂದು ಬರೆಯಲು ಪರದಾಡಿದ್ದನ್ನು ಬಿಜೆಪಿ ವ್ಯಂಗ್ಯವಾಡಿದೆ. ಅನಕ್ಷರಸ್ಥರ ದೊಡ್ಡಿಯಾಗಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಸ್ಮಿತೆಗೆ ಕೊಳ್ಳಿ ಇಟ್ಟಿದೆ. ಇಂತಹ ಮಹಾನ್ ಮೇಧಾವಿಗಳಾದ ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಪಡೆದ ಕರುನಾಡು ಪಾವನ ಎಂದು ಬಿಜೆಪಿ ಟೀಕಿಸಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ಜೆಪಿ ನಗರದ ಅಂಗವಾಡಿಗೆ ಭೇಟಿ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕನ್ನಡದಲ್ಲಿ ‘ಶುಭವಾಗಲಿ’ ಎಂದು ಬರೆಯಲು ಪರದಾಡಿದ್ದರು. ‘ಶಬ’ ಎಂದು ಬರೆದ ಬಳಿಕ ಬೆಂಬಲಿಗರು ಶುಭ ಮಾಡಲು ಸೂಚಿಸಿದ್ದರಿಂದ ಆನಂತರ ಸರಿಯಾಗಿ ಬರೆದಿದ್ದರು. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಶಿಕ್ಷಣ ಸಚಿವರ ರೀತಿಯಲ್ಲೇ ಕನ್ನಡ ಸಂಸ್ಕೃತಿ ಸಚಿವರಿಗೂ ಕನ್ನಡ ಓದಲು, ಬರೆಯಲು ಬರಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸಚಿವರು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಕುರಿತು ವ್ಯಂಗ್ಯವಾಡಿದೆ. ಕನ್ನರಾಮಯ್ಯ ಸರ್ಕಾರದಿಂದ ಕನ್ನಡದ ಕಗ್ಗೋಲೆ ಎಂದಿರುವ ಬಿಜೆಪಿ, ಕನ್ನಡ ಓದಲು ಬರೆಯಲು ಬಾರದ ಅನಕ್ಷರಸ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದು ಕಡೆಯಾದರೆ, ಕನ್ನಡದ ಸುಲಭವಾದ ಪದವನ್ನು ಬರೆಯಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿಲ ವಿಲ ಒದ್ದಾಡಿದ್ದಾರೆ. ಅನಕ್ಷರಸ್ಥರ ದೊಡ್ಡಿಯಾಗಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಸ್ಮಿತೆಗೆ ಕೊಳ್ಳಿ ಇಟ್ಟಿದೆ ಎಂದು ವ್ಯಂಗ್ಯವಾಡಿದೆ.