ಬೆಳಗಾವಿ: ಬೆಳಗಾವಿ ಕಮಿಷನರ್ ವ್ಯಾಪ್ತಿಯ ಕ್ಯಾಂಪ್ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್, ಮೂಲತಃ ಸಂತಿಬಸ್ತವಾಡ ಗ್ರಾಮದವರಾದ ಮಲ್ಲಸರ್ಜ ಅಂಕಲಗಿ (45) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಲ್ಲಸರ್ಜ ಅಂಕಲಗಿ ಅವರು ಎಂದಿನಂತೆ ಕರ್ತವ್ಯ ಮುಗಿಸಿಕೊಂಡು ಶನಿವಾರ ರಾತ್ರಿ ಊಟ ಮಾಡಿ ಮಲಗಿದ್ದಾರೆ. ರವಿವಾರ ಬೆಳಕು ಹರಿದರೂ ಮಲಗಿಯೇ ಇದ್ದು ಏಳದ ಅವರನ್ನು ಮನೆಯವರು ಎಬ್ಬಿಸಲು ಹೋದಾಗ ವಿಷಯ ಬೆಳಕಿಗೆ ಬಂದಿದೆ.
ಅವರ ಅಕಾಲಿಕ ನಿಧನಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಎಲ್ಲ ಸಿಬ್ಬಂದಿಗಳಿಗೆ ಅಚ್ಚು ಮೆಚ್ಚಿನವರಾಗಿದ್ದರು. ಮಲ್ಲಸರ್ಜ ಅವರ ನಿಧನದಿಂದ ಅವರನ್ನು ಅವಲಂಬಿಸಿದ್ದ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ.
ಸಂತಿಬಸ್ತವಾಡದ ಬಡ ಕುಟುಂಬದಲ್ಲಿ ಜನಿಸಿದ ಅವರು, ಕಷ್ಟ ಪಟ್ಟು ಓದಿ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಕುಟುಂಬಕ್ಕೆ ಆಧಾರವಾಗಿದ್ದರು.
ಅವರ ಪುಟ್ಟ ಮಕ್ಕಳು ಸದ್ಯ ಓದುತ್ತಿದ್ದಾರೆ. ಮಕ್ಕಳ ಓದಿನ ಬಗ್ಗೆ ಅಪಾರ ಕನಸು ಕಂಡಿದ್ದ ಮಲ್ಲಸರ್ಜ ಅಂಕಲಗಿ ಅವರು ಭವಿಷ್ಯದಲ್ಲಿ ಅವರಿಗೆ ಉನ್ನತ ವಿದ್ಯಾಭ್ಯಾಸ ನೀಡಿ ದೊಡ್ಡ ವ್ಯಕ್ತಿಗಳನ್ನಾಗಿ ಮಾಡುವ ಕನಸು ಕಂಡಿದ್ದರು. ಜೊತೆಗೆ ತಾವು ಸಹಾ ಮುಂದಿನ ದಿನಗಳಲ್ಲಿ ಬಡ್ತಿ ಹೊಂದುತ್ತಿರುವ ವಿಷಯವನ್ನು ಸ್ನೇಹಿತರಲ್ಲಿ ಹಂಚಿಕೊಂಡು ಸಂತಸ ಪಡುತ್ತಿದ್ದರು. ಬೆಳಗಾವಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ ಅವರು ಅಪಾರ ಸ್ನೇಹ ವಲಯವನ್ನು ಸೃಷ್ಟಿಸಿಕೊಂಡಿದ್ದರು. ಹೀಗಾಗಿ ಅವರು ಜನಪ್ರಿಯ ಪೊಲೀಸ್ ಎಂದು ಗುರುತಿಸಿಕೊಂಡಿದ್ದರು ಅವರ ನಿಧನಕ್ಕೆ ಪೊಲೀಸರು ಹಾಗೂ ನಾಗರಿಕರು ಕಂಬನಿ ಮಿಡಿದಿದ್ದಾರೆ.