ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಹಲವಡೆ ಮಂಗಳವಾರ ಅಪರಾಹ್ನದ ನಂತರ ಸುರಿದ ಭೀಕರ ಆಲಿಕಲ್ಲು ಮಳೆಯಿಂದಾಗಿ ಸಂಪೂರ್ಣವಾಗಿ ‘ಹಿಮಲೋಕ’ವಾಗಿ ಪರಿವರ್ತನೆಗೊಂಡಿತ್ತು.
ಮಧ್ಯಾಹ್ನದ ನಂತರ ಹವಾಮಾನ ಬದಲಾಗಿದ್ದು, ಕಲಘಟಗಿ ಪಟ್ಟಣ, ಬೆಲವಂತರ, ಮಾಚಾಪುರ, ಸೋಮನಕೊಪ್ಪ ಮೊದಲಾದ ಗ್ರಾಮಗಳಲ್ಲಿ ಆರಂಭದಲ್ಲಿ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ನೋಡನೋಡುತ್ತಿದ್ದಂತೆ ಭೀಕರ ಆಲಿಕಲ್ಲು ಮಳೆಯ ರೂಪ ತಾಳಿತು. ಮಧ್ಯಾಹ್ನ 3ರ ನಂತರ ಆಲಿಕಲ್ಲು ಮಳೆ ಬಿದ್ದ ಪರಿಣಾಮ ಜನರು ಪರದಾಡಿದರು.
ಸಂತೆಯ ದಿನವಾಗಿದ್ದರಿಂದ ಸಂತೆಗೆ ಬಂದವರು ಒಮ್ಮೆಲೇ ಸುರಿದ ಆಲಿಕಲ್ಲು ಮಳೆಯಿಂದ ತೊಂದರೆಗೆ ಒಳಗಾದರು. ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸತತವಾಗಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಕಲಘಟಗಿಯ ರಸ್ತೆಗಳು, ಗಲ್ಲಿಗಳು ಹಾಗೂ ಖಾಲಿ ಮೈದಾನಗಳು ದಪ್ಪನೆಯ ಮಂಜುಗಡ್ಡೆ(ಹಿಮ)ಯ ಪದರದಿಂದ ಆವೃತವಾದವು. ರಸ್ತೆಗಳು ಬಿಳಿ ಬಣ್ಣಕ್ಕೆ ತಿರುಗಿದ್ದು, ಕಾಶ್ಮೀರದ ಹಿಮಪಾತದ ದೃಶ್ಯವನ್ನು ನೆನಪಿಸುವಂತಿದ್ದವು.


