ಬೆಳಗಾವಿ : ಕಾರ್ಯಾಂಗ ಮತ್ತು ಶಾಸಕಾಂಗದ ವೈಫಲ್ಯ ಉಂಟಾದಾಗಲೆಲ್ಲ ನ್ಯಾಯಾಂಗ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮತ್ತು ಕೆಎಲ್ ಇ ಸಂಸ್ಥೆ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ಕೆಎಲ್ ಇ ಸಂಸ್ಥೆಯ ಬಿ.ವಿ. ಕಾನೂನು ಮಹಾವಿದ್ಯಾಲಯ ಬುಧವಾರ ಲಿಂಗರಾಜ ಕಾಲೇಜು ಸೆಂಟ್ರಲ್ ಹಾಲಿನಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಅವರು ಭಾರತೀಯ ಸಂವಿಧಾನ ಮತ್ತು ಚುನಾವಣೆ ಸುಧಾರಣೆ ವಿಷಯವಾಗಿ ಮಾತನಾಡಿದರು.
ನ್ಯಾಯಾಂಗ ಕಾನೂನನ್ನು ಉಪಯೋಗಿಸಿ ಜನತೆಗೆ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸುತ್ತದೆ. ಪ್ರಸ್ತುತ ಸಂದರ್ಭದಲ್ಲಿ ನ್ಯಾಯವಾದಿಗಳು ಮತ್ತು ಕಾನೂನು ವಿದ್ಯಾರ್ಥಿಗಳ ಜೀವನದಲ್ಲಿ ನ್ಯಾಯಾಂಗ ಉಜ್ವಲ ಭವಿಷ್ಯ ನೀಡುವತ್ತ ಸದಾವಕಾಶ ಹೊಂದಿದೆ ಎಂದು ಅವರು ಹೇಳಿದರು.
ಭಾರತ ಭೌಗೋಳಿಕ ಮತ್ತು ರಾಜಕೀಯವಾಗಿ ಹಲವು ಸವಾಲುಗಳಿಂದ ಸುತ್ತುವರಿದಿದೆ. ಜವಾಬ್ದಾರಿಯುತ ಆಡಳಿತವನ್ನು ಇನ್ನಷ್ಟು ನಿರ್ಣಾಯಕವಾಗಿದ್ದು ಮುಂದಿನ ದಿನಗಳಲ್ಲಿ ಜಾರಿಯಾಗಲಿರುವ ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ವಿಶಿಷ್ಟ ಕಲ್ಪನೆಗೆ ಬೆಂಬಲವಿದೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಎಂ.ಬಿ. ಜೀರಲಿ ಮಾತನಾಡಿ, ಭಾರತ ಸಂವಿಧಾನ ಕಾನೂನು ದಾಖಲೆಯಲ್ಲ. ಬದಲಿಗೆ ಜೀವಂತ ದಾಖಲೆಯಾಗಿದೆ. ಇದು ದೇಶದ ಜನರ ಭಾವನೆಗಳನ್ನು ಒಳಗೊಂಡಿದೆ. ಇದು ಈ ದೇಶದ ವಿವಿಧ ಸಾಂಸ್ಕೃತಿಕ ಮತ್ತು ಭಾಷಾ ತಿಳವಳಿಕೆಯ ಸಂಯೋಜನೆಯಾಗಿದೆ. ರಾಮಾ ಜೋಯಿಸ್ ಅವರಂತಹ ಕಾನೂನು ದಿಗ್ಗಜರನ್ನು ಉಲ್ಲೇಖಿಸಿದ ಅವರು, ನೀವು ಕಾನೂನು ವೃತ್ತಿಗಳಲ್ಲಿ ತೊಡಗಿಸಿಕೊಳ್ಳಲು ಬಯಸಿದರೆ ಭಾರತ ಸರ್ಕಾರದ ಕಾಯ್ದೆ 1919, 1935 ಇವುಗಳನ್ನು ಮುಖ್ಯವಾಗಿ ಓದಬೇಕು. ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಆನ್ಲೈನ್ ನಲ್ಲಿ ಓದಬಹುದಾಗಿದೆ ಎಂದು ಅವರು ತಿಳಿಸಿದರು.
ಶ್ರೇಷ್ಠ ಮಟ್ಟದ ಕಾನೂನು ಪಾಂಡಿತ್ಯವನ್ನು ಹೊಂದಿದಲ್ಲಿ
ವಿದ್ಯಾರ್ಥಿಗಳು ಕಾನೂನು ಮತ್ತು ಜೀವನದಲ್ಲಿ ತಮ್ಮದೇ ಆದ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯ ಪಟ್ಟರು.
ಬೆಳಗಾವಿ ಆರ್ಪಿಡಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ
ಡಾ.ಸುಭಾಷ ಪಾಟೀಲ ಅವರು ಭಾರತದಲ್ಲಿ ಚುನಾವಣಾ ಸುಧಾರಣೆಗಳು: ಸವಾಲುಗಳು ಮತ್ತು ಅಗತ್ಯ ಮಾಹಿತಿಗಳು ವಿಷಯವಾಗಿ ಮಾತನಾಡಿದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಲಿಂಗರಾಜ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಅಶೋಕ ಆನಿಕಿವಿ ವಹಿಸಿದ್ದರು.
ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಅನಿಲ್ ಕಟ್ಟಿ ಅವರು ಭಾರತೀಯ ಚುನಾವಣಾ ಸುಧಾರಣೆಗಳಲ್ಲಿ ನ್ಯಾಯಾಂಗದ ಪಾತ್ರ ವಿಷಯವಾಗಿ ಹಲವಾರು ಮಹತ್ವದ ಪ್ರಕರಣಗಳನ್ನು ಉಲ್ಲೇಖಿಸಿದರು. ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಕಾಲಾನಂತರದಲ್ಲಿ ಗಮನಾರ್ಹ ಸುಧಾರಣೆಗಳಿಗೆ ಒಳಗಾಗಿದೆ. ಭಾರತ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಹೊಣೆಗಾರಿಕೆ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ನ್ಯಾಯಾಂಗ ವಿಮರ್ಶೆ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಒತ್ತಿ ಹೇಳಿದರು.
ನ್ಯಾಯಾಂಗ ತನ್ನ ಇಚ್ಛೆಯಂತೆ ಕೆಲಸ ಮಾಡಬಾರದು ಮತ್ತು ಅದು ಸಂವಿಧಾನವನ್ನು ಅತಿಕ್ರಮಿಸಬಾರದು. ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ನಡೆಸಲು ಕಾರ್ಯಾಂಗದಲ್ಲಿ ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಭಿಮತ ವ್ಯಕ್ತಪಡಿಸಿದರು. ಬೆಳಗಾವಿ ಬೆಲ್ಲದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ನ್ಯಾಯವಾದಿ ಆರ್. ಬಿ. ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ವಂದೇ ಮಾತರಂ ಗೀತೆ 150 ವರ್ಷಾರಣೆ ಆಚರಿಸುತ್ತಿರುವ ಹಿನ್ನೆಲೆಯಲ್ಲಿ
ಬೆಲ್ಲದ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿನಿಯರು ಈ ಗೀತೆಯನ್ನು ಹಾಡಿದರು. ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜ್ಯೋತಿ ಹಿರೇಮಠ ಸ್ವಾಗತಿಸಿದರು. ಕಾರ್ಯಾಗಾರದ ಸಂಯೋಜಕರಾದ ಡಾ.ಸುಪ್ರಿಯಾ ಸ್ವಾಮಿ ಮತ್ತು ರಾಜಶ್ರೀ ಪಾಟೀಲ ಪರಿಚಯಿಸಿದರು. ಎಲ್ ಎಲ್ ಬಿ ಅಂತಿಮ ವರ್ಷದ ವಿದ್ಯಾರ್ಥಿನಿ ಪ್ರೇರಣಾ ಹನಮಶೇಠ್ ನಿರೂಪಿಸಿದರು.


