ಬೆಳಗಾವಿ : ಸವದತ್ತಿ ತಾಲೂಕಿನ ನವೀಲು ತೀರ್ಥ ಜಲಾಶಯದಿಂದ ರಾಮದುರ್ಗ ತಾಲೂಕಿನ ಅವರಾದಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ (WTP) ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡುವ ಕಾಮಗಾರಿ ಸ್ಥಳಕ್ಕೆ ಹಾಗೂ ಜಾಕ್ ವೇಲ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಪಂ. ಸಿಇಒ ರಾಹುಲ್ ಶಿಂಧೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ರಾಮದುರ್ಗ ತಾಲೂಕಿನ ಅವರಾದಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಶುದ್ದೀಕರಣ ಘಟಕ ಮತ್ತು ಜಾಕವೇಲ್ ನಿರ್ಮಾಣ ಕಾಮಗಾರಿಯನ್ನು ಉತ್ತಮ ಗುಣಮಟ್ಟದಿಂದ ನಿರ್ವಹಿಸಬೇಕು ಹಾಗೂ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸವದತ್ತಿ ಪಟ್ಟಣದಲ್ಲಿರುವ ತಾಲೂಕಾ ಮಟ್ಟದ ಗ್ರಾಮೀಣ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಕ್ಕೆ ಭೇಟಿ ನೀಡಿ ಪ್ರಯೋಗಾಲಯನ್ನು ಪರಿಶೀಲಿಸಿ ಕಡ್ಡಾಯವಾಗಿ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಕಾಲ ಕಾಲಕ್ಕೆ ಮಾಡಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವಂತೆ ಜಿಪಂ ಸಿ.ಇ.ಒ ಸೂಚನೆ ನೀಡಿದರು.
ಮುಂದುವರೆದು ಬೈಲಹೊಂಗಲ ತಾಲ್ಲೂಕಿನ ಉಡಿಕೇರಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕೊಠಡಿಗಳಿಗೆ ಭೇಟಿ ನೀಡಿ ಶುಚಿತ್ವ ಹಾಗೂ ರೋಗಿಗಳ ಜೊತೆ ಮಾತನಾಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿಯವರಿಗೆ ಆರೋಗ್ಯ ಕೇಂದ್ರ ಒಳಗಡೆ ಹಾಗೂ ಹೊರಗಡೆ ಶುಚಿತ್ವವನ್ನು ಕಾಪಾಡಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಸವದತ್ತಿ ಹಾಗೂ ಬೈಲಹೊಂಗಲ ತಾಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಯಶವಂತಕುಮಾರ, ಸುಭಾಷ ಸಂಪಗಾವಿ, ಗ್ರಾ.ಕು.ನೀ & ನೈರ್ಮಲ್ಯ ಇಲಾಖೆ ಇಇ ಶಶಿಕಾಂತ ನಾಯಕ ಸಹಾಯಕ ನಿರ್ದೇಶಕರು (ಗ್ರಾ.ಉ) ಆರ್ ಬಿ ರಕ್ಕಸಗಿ, ಆರ್.ಡಬ್ಲ್ಯೂಎಸ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಬಿ ವಿ ಅಯ್ಯನಗೌಡರ, ಕಿರಣ ಗೋರ್ಪಡೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಇನ್ನಿತರರು ಉಪಸ್ಥಿತರಿದ್ದರು.